ಸ್ಯಾಂಡಲ್‌ವುಡ್‌ನ (Sandalwood) ಜ್ಯೂನಿಯರ್ ರೆಬಲ್ ಕಪಲ್ ಅಭಿಷೇಕ್- ಅವಿವ ಜೂನ್ 5ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 5 ವರ್ಷಗಳ ಪ್ರೀತಿಗೆ ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ‘ಅಭಿ’ವಾ (Abhiva) ಅದ್ದೂರಿ ಮದುವೆಗೆ ಚಿತ್ರರಂಗ ಸಾಕ್ಷಿಯಾಗಿದೆ. ಮದುವೆ ಸಂಭ್ರಮ ಹೇಗಿತ್ತು.? ಯಾರೆಲ್ಲಾ ಅಂಬರೀಶ್ ಪುತ್ರನ ಮದುವೆಗೆ ಹಾಜರಿ ಹಾಕಿದ್ರು ಎಂಬುದಕ್ಕೆ ಇಲ್ಲಿದೆ ಡಿಟೈಲ್ಸ್.
ಅಂಬರೀಶ್ ಅವರ ಆಸೆಯಂತೆಯೇ ಪುತ್ರ ಅಭಿಷೇಕ್ ಮದುವೆ ನಡೆದಿದೆ. ಅಂಬಿ ಪುತ್ರನ ಮದುವೆ ಗೌಡರ ಸಂಪ್ರದಾಯದಂತೆ ಅದ್ಧೂರಿಯಾಗಿ ಜರುಗಿದೆ. ಕೆಲ ವರ್ಷಗಳ ಹಿಂದೆ ಸಮಾರಂಭವೊಂದರಲ್ಲಿ ಭೇಟಿಯಾದ ಅಭಿ-ಅವಿವ, ಪರಿಚಯ ಸ್ನೇಹವಾಗಿ ಪ್ರೀತಿಗೆ ತಿರುಗಿತ್ತು. ಸತತ 5 ವರ್ಷಗಳ ಪ್ರೇಮ ಬರಹಕ್ಕೆ ಇಂದು ಮದುವೆಯೆಂಬ ಮುದ್ರೆ ಒತ್ತಿದ್ದಾರೆ. ಗುರುಹಿರಿಯರ ಒಪ್ಪಿಗೆ ಮೇರೆಗೆ ಬೆಂಗಳೂರಿನ ಮಾಣಿಕ್ಯ ಚಾಮರ ವಜ್ರದಲ್ಲಿ ಅದ್ದೂರಿಯಾಗಿ ಅಭಿ-ಅವಿವ ಮದುವೆಯಾಗಿದ್ದಾರೆ. ಇದನ್ನೂ ಓದಿ:ಐವತ್ತು ದಿನ ಪೂರೈಸಿದ ಶಿವಾಜಿ ಸುರತ್ಕಲ್ 2
ಅಂಬರೀಶ್ ಅವರು ಇದ್ದಾಗಲೇ ಮಗನ ಪ್ರೀತಿ ಬಗ್ಗೆ ತಿಳಿದಿತ್ತು. ಅವಿವರನ್ನ (Aviva) ಅಂದೇ ಸೊಸೆ ಎಂದು ಅಂಬಿ ತೀರ್ಮಾನಿಸಿದ್ದರು. ಮಗನ ಮದುವೆ ಗೇಗಿರಬೇಕು ಎಂದು ಅಂಬರೀಶ್ ಇಷ್ಟಪಟ್ಟಿದ್ದರೋ ಅದೇ ರೀತಿ ಇಂದು ಅಭಿ-ಅವಿವ ಮದುವೆ ಜರುಗಿದೆ. ಪತಿಯ ಸ್ಥಾನದಲ್ಲಿ ಮುಂದೆ ನಿಂತು ಸುಮಲತಾ ಮದುವೆಯನ್ನ ಮಗನ ಮನದರಸಿ ಜೊತೆ ನಡೆಸಿಕೊಟ್ಟರು.
ಮದುವೆಯಲ್ಲಿ ಅಭಿಷೇಕ್ (Abhishek Ambareesh) ಗೋಲ್ಡನ್ ಬಣ್ಣದ ಶರ್ಟ್ ಮತ್ತು ಪಂಚೆಯಲ್ಲಿ ಕಾಣಿಸಿಕೊಂಡರೆ, ವಧು ಅವಿವ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ್ದಾರೆ. ಸಂಸದೆ ಸುಮಲತಾ ಅಂಬರೀಶ್ ಕೂಡ ಗೋಲ್ಡನ್ ಸೀರೆಯಲ್ಲಿ ಮಿಂಚಿದ್ದಾರೆ. ವಿಶೇಷ ಅಂದರೆ ತಮ್ಮ ಮದುವೆಗೆ, ಅವಿವ ಅವರೇ ಉಡುಗೆಯನ್ನ ಡಿಸೈನ್ ಮಾಡಿದ್ದಾರೆ.
ಅಂಬಿ ಪುತ್ರನ ಮದುವೆ ಚಿತ್ರರಂಗದ ದಂಡೇ ಬಂದಿತ್ತು. ಅಭಿ ಕಲ್ಯಾಣದಲ್ಲಿ ರಜನಿಕಾಂತ್, ಮೀನಾ, ನ್ಯಾಷನಲ್ ಸ್ಟಾರ್ ಯಶ್-ರಾಧಿಕಾ ಪಂಡಿತ್, ಸುದೀಪ್, ಪವಿತ್ರಾ ಲೋಕೇಶ್, ತೆಲುಗು ನಟ ನರೇಶ್, ಸಿಂಗರ್ ವಿಜಯ್ ಪ್ರಕಾಶ್ ದಂಪತಿ, ಗುರುಕಿರಣ್, ತಮಿಳು ನಟ ಮೋಹನ್ ಬಾಬು, ಕ್ರಿಕೆಟಿಗ ಅನಿಲ್ ಕುಂಬ್ಳೆ, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭಾಗಿಯಾಗಿದ್ದರು. ಇದೀಗ ಅಂಬಿ ಪುತ್ರನ ದಾಂಪತ್ಯ ಜೀವನಕ್ಕೆ ಅಭಿಮಾನಿಗಳು ಕೂಡ ಶುಭಕೋರುತ್ತಿದ್ದಾರೆ.
ಇನ್ನೂ ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.