ಬೆಂಗಳೂರು: ಸರ್ಕಾರಿ ಭೂಮಿ ಒತ್ತುವರಿ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಸರ್ಕಾರಿ ಜಾಗ ಉಳಿಸಲು ಸರ್ಕಾರ ಹೊಸ ಆದೇಶ ಹೊರಡಿಸಿದೆ. ಅಲ್ಲದೇ ಸರ್ಕಾರಿ ಜಮೀನು ಒತ್ತುವರಿ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಕ್ರಮಕ್ಕೂ ನಿರ್ಧಾರ ತೆಗೆದುಕೊಂಡಿದೆ.
ಇಷ್ಟೇ ಅಲ್ಲದೆ ಒತ್ತುವರಿದಾರರ ವಿರುದ್ಧ ಕ್ರಮ ತೆಗೆದುಕೊಳ್ಳದ ಅಧಿಕಾರಿಗಳ ವಿರುದ್ಧವೇ ಕ್ರಮ ತೆಗೆದುಕೊಳ್ಳುವ ಮಹತ್ವದ ನಿರ್ಧಾರ ಕಂದಾಯ ಇಲಾಖೆ ಮಾಡಿದೆ. ಇದಲ್ಲದೆ ನಕಲಿ ದಾಖಲೆ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಿದೆ. ಜಿಲ್ಲಾಧಿಕಾರಿಗಳಿಗೆ 15 ಅಂಶಗಳ ಆದೇಶದ ಹೊರಡಿಸಿದ್ದು, ಡಿಸಿ ಗಳು ಕಡ್ಡಾಯವಾಗಿ ಪಾಲಿಸುವಂತೆ ಕಂದಾಯ ಇಲಾಖೆ ಸೂಚನೆ ನೀಡಿದೆ.
ಆದೇಶದಲ್ಲಿ ಏನಿದೆ?
ಡಿಸಿಗಳು ಒತ್ತುವರಿ ತೆರವು ಬಾಕಿ ಇರುವ ಪ್ರಕರಣವನ್ನು15 ದಿನಗಳಲ್ಲಿ ಪೂರ್ಣಗೊಳಿಸಬೇಕು. ನಗರ, ವಾಣಿಜ್ಯ, ಕೈಗಾರಿಕೆ ಇನ್ನಿತರ ಉದ್ಯಮಗಳು ಸರ್ಕಾರಿ ಜಾಗ ಒತ್ತುವರಿ ಮಾಡಿದರೆ ಕಾನೂನಿನ ಕ್ರಮ ತೆಗೆದುಕೊಳ್ಳಬೇಕು. ಒತ್ತುವರಿ ತೆರವುಗೊಳಿಸಲು ವಿಫಲವಾದ ಅಧಿಕಾರಿಗಳ ವಿರುದ್ಧ 192ಎ/192ಬಿ ಅನ್ವಯ ಕಾನೂನು ಕ್ರಮ ತೆಗೆದುಕೊಳ್ಳಬೇಕು. ನಕಲಿ ದಾಖಲೆ ಸೃಷ್ಟಿಸಿರುವ ಭೂ ಕಬಳಿಕೆ ವಿರುದ್ಧ ಬಂದಿರುವ ದೂರು ಕಾಲ ಮಿತಿಯಲ್ಲಿ ಪೂರ್ಣಗೊಳಿಸಬೇಕು.
ನಕಲಿ ದಾಖಲೆ ಸೃಷ್ಟಿಯಲ್ಲಿ ಸರ್ಕಾರದ ಅಧಿಕಾರಿ ಕೈವಾಡ ಇದ್ದರೆ ಆ ಅಧಿಕಾರಿಯ ಪ್ರಾಥಮಿಕವಾಗಿ ಅಮಾನತು ಮಾಡಿ ತನಿಖೆ ನಡೆಸಬೇಕು. ನಕಲಿ ದಾಖಲೆ ಸೃಷ್ಟಿಸಿ ದೃಢವಾಗಿದ್ದರೆ ಅಂತಹ ಅಧಿಕಾರಿ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಬೇಕು. ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದ್ದರೆ ತಡೆಯಾಜ್ಞೆ ತೆರವು ಮಾಡಿಸಲು ಅಗತ್ಯ ಕ್ರಮ ತೆಗೆದುಕೊಳ್ಳಬೇಕು.
ಒತ್ತುವರಿ ತೆರವು ಮಾಡಿದ ಜಮೀನಿಗೆ ನಾಮಫಲಕ, ತಂತಿ ಬೇಲಿ ಹಾಕಿ ರಕ್ಷಣೆ ಮಾಡಬೇಕು. ಡಿಸಿಗಳು ಪ್ರತಿ ತಿಂಗಳು ಒತ್ತುವರಿ ಕುರಿತು ಸಭೆ ಮಾಡಬೇಕು ಎಂಬ ಅಂಶಗಳು ಈ ಆದೇಶದಲ್ಲಿದೆ.