ಬೆಂಗಳೂರು: ಸಹೋದ್ಯೋಗಿ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಆರೋಪವನ್ನು ಎದುರಿಸುತ್ತಿರುವ ಪತ್ರಕರ್ತ ರವಿ ಬೆಳಗೆರೆ ಅವರಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ 1ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ.
ಬೆಳಗೆರೆ ಅರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆಯಲ್ಲಿ ಅವರ ಪರ ವಕೀಲರು ಜಾಮೀನು ಅರ್ಜಿ ಸಲ್ಲಿಸುವ ಮೊದಲೇ ಸಿಸಿಬಿ ಪೊಲೀಸರ ಪರ ವಕೀಲರು 10 ಕಾರಣಗಳನ್ನು ನೀಡಿ ಜಾಮೀನು ಮಂಜೂರು ಮಾಡದಂತೆ ಆಕ್ಷೇಪಣೆ ಸಲ್ಲಿಸಿದ್ದಾರೆ.
Advertisement
Advertisement
ಆ 10 ಕಾರಣಗಳು:
1. ಆರೋಪಿ ರವಿ ಬೆಳಗೆರೆ ಅವರು ಸಮಾಜದಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದು, ಇವರು ಕಾನೂನು ತಿಳಿದಂತಹ ಪತ್ರಕರ್ತರಾಗಿದ್ದಾರೆ ಮತ್ತು ಸ್ವಂತ ಪತ್ರಿಕೆ ನಡೆಸುತ್ತಿದ್ದಾರೆ. ಇವುಗಳನ್ನು ತಿಳಿದ ಈ ವ್ಯಕ್ತಿ ಕಾನೂನಿಗೆ ಗೌರವವನ್ನು ನೀಡದೇ ತನ್ನ ಸಹೋದ್ಯೋಗಿಯೊಬ್ಬರನ್ನೇ ಕೊಲೆ ಮಾಡಿಸಲು ಸುಪಾರಿ ನೀಡಿದ ಪ್ರಕರಣದ ಆರೋಪಿಯಾಗಿರುತ್ತಾರೆ.
Advertisement
2. ರವಿಬೆಳಗೆರೆ ರವರು ಮುಂದಿನ ದಿನಗಳಲ್ಲಿ ಸಮಾಜದಲ್ಲಿ ತಮಗಿರುವ ಪ್ರಭಾವವನ್ನು ಬಳಸಿ ಈ ಪ್ರಕರಣದಲ್ಲಿ ಮುಂದಿನ ತನಿಖೆಯಲ್ಲಿ ಸಂಗ್ರಹಿಸಬೇಕಾದಂತಹ ಸಾಕ್ಷಾಧಾರಗಳನ್ನು ನಾಶಪಡಿಸುವ ಸಂಭವ ಇರುತ್ತದೆ.
Advertisement
3. ಅಪರಾಧಗಳ ಸಂಬಂಧ ಹೆಚ್ಚು ಹೆಚ್ಚು ಸುದ್ದಿಗಳನ್ನು, ಭೂಗತ ಲೋಕದ ಸುದ್ದಿಗಳನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸಿ ಭೂಗತ ಪಾತಕಿಗಳೊಂದಿಗೆ ಸಂಪರ್ಕ ಹೊಂದಿದ್ದಂತಹ ಪತ್ರಕರ್ತರಾಗಿದ್ದು, ತಮಗಿರುವ ಈ ಭೂಗತ ಲೋಕದ ಸಂಪರ್ಕವನ್ನು ತಮ್ಮ ವೈಯಕ್ತಿಕ/ವ್ಯವಹಾರಿಕ ಬದುಕಿನ ಸಮಸ್ಯೆಗಳಿಗೆ ಉಪಯೋಗಿಸಿಕೊಂಡು ಕೊಲೆ ಮಾಡಿಸಲು ಸುಪಾರಿ ನೀಡಿದ ಆರೋಪ ಹೊಂದಿರುತ್ತಾರೆ.
4. ಶಸ್ತ್ರ ಪರವಾನಗಿಯನ್ನು ರವಿ ಬೆಳಗೆರೆ ಹೊಂದಿದ್ದು, ಅವರು ಪರವಾನಗಿ ಹೊಂದಿದ್ದ ಶಸ್ತ್ರವನ್ನೇ ಈ ಪ್ರಕರಣದಲ್ಲಿ ಬಳಸಿರುವುದು ಕಂಡು ಬರುತ್ತದೆ.
5. ಬೆಳಗೆರೆ ಹೊಂದಿದ್ದ ಶಸ್ತ್ರ ಪರವಾನಗಿಯ ನಿಬಂಧನೆಗಳನ್ನು ಉಲ್ಲಂಘಿಸಿ ಅಕ್ರಮವಾಗಿ ಹೆಚ್ಚಿನ ಗುಂಡುಗಳನ್ನು ಹೊಂದಿರುವುದು ತನಿಖೆಯಲ್ಲಿ ಕಂಡು ಬಂದಿದ್ದು, ಇವರು ಅಪರಾಧದಲ್ಲಿ ಭಾಗಿಯಾಗುವ ಸಲುವಾಗಿಯೇ ಅಕ್ರಮವಾಗಿ ಗುಂಡುಗಳನ್ನು ಹೊಂದಿರುವುದು ದೃಢಪಟ್ಟಿರುತ್ತದೆ.
6. ಆರೋಪಿಗೆ ಅಪರಾಧ ಜಗತ್ತಿನ ಮಾಹಿತಿ ಇದ್ದು ತಮ್ಮ ವೃತ್ತಿ ಜೀವನದಲ್ಲಿ ಹಲವಾರು ಪ್ರಕರಣಗಳ ಬಗ್ಗೆ ಅಳವಾದ ಮಾಹಿತಿಯನ್ನು ಹೊಂದಿದ್ದಾರೆ. ತಮಗಿರುವ ಅಪರಾಧ ಜಗತ್ತಿನ ಜ್ಞಾನದಿಂದ ಈ ಪ್ರಕರಣವನ್ನು ಯಾರಿಗೂ ತಿಳಿಯದಂತೆ ಮುತುವರ್ಜಿಯಿಂದ ಯವುದೇ ಸಾಕ್ಷ್ಯಾಧಾರಗಳನ್ನು ಸಿಗದಂತೆ ಮಾಡಲು ಪ್ರಯತ್ನಿಸಿದ್ದು, ಇಂತಹ ಪ್ರಕರಣದಲ್ಲಿ ಹೆಚ್ಚಿನ ವೈಜ್ಞಾನಿಕ ತನಿಖೆಗಾಗಿ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಬೇಕಾದ ಅಗತ್ಯತೆ ಇದೆ. ಹೀಗಾಗಿ ಅಲ್ಲಿಯವರೆಗೂ ಆರೋಪಿಯು ನ್ಯಾಯಾಂಗ ಬಂಧನದಲ್ಲಿರುವ ಅಗತ್ಯತೆ ಇರುತ್ತದೆ.
7. ಬೆಳಗೆರೆ ಬಳಸುತ್ತಿದ್ದ ಐ ಪೋನ್ ಮತ್ತು ಟ್ಯಾಬ್ ಗಳಳನ್ನು ವಶ ಪಡಿಸಿಕೊಳ್ಳಲಾಗಿದೆ. ಇವುಗಳಲ್ಲಿ ತನಿಖೆಗೆ ಸಂಬಂಧಿಸಿದ ಸಾಕ್ಷ್ಯಗಳು ಇರುವ ಸಾಧ್ಯತೆ ಇದ್ದು, ಸಾಕ್ಷ್ಯಗಳನ್ನು ಸಂಗ್ರಹಿಸುವ ಸಲುವಾಗಿ ಇವುಗಳನ್ನು ತಜ್ಞರ ಬಳಿ ಕಳುಹಿಸಬೇಕಾದ ಅಗತ್ಯತೆ ಇರುತ್ತದೆ.
8. ಈ ಪ್ರಕರಣದಲ್ಲಿ ಹೆಚ್ಚಿನ ಸಾಕ್ಷಿದಾರರು ಆರೋಪಿ ರವಿಬೆಳಗೆರೆ ಅವರ ಕಚೇರಿಯಲ್ಲಿ ಕೆಲಸ ಮಾಡುವವರೇ ಆಗಿದ್ದು ಇವರುಗಳ ಮೇಲೆ ಆರೋಪಿ ತನ್ನ ಪ್ರಭಾವವನ್ನು ಬೀರಿ ಅವರು ನಿರ್ಭಿತಿಯಿಂದ ಸಾಕ್ಷಿ ನುಡಿಯಲು ಮುಂದೆ ಬರದೇ ಇರುವ ಪರಿಸ್ಥಿತಿ ನಿರ್ಮಾಣ ಮಾಡುವ ಸಂಭವವಿದೆ. ಹೀಗಾಗಿ ಸಾಕ್ಷಿದಾರರು ನಿರ್ಭಿತಿಯಿಂದ ಸಾಕ್ಷಿ ನುಡಿಯಲು ಆರೋಪಿಯೂ ನ್ಯಾಯಾಂಗ ಬಂಧನದಲ್ಲಿರುವುದು ಅತ್ಯವಶ್ಯಕವಾಗಿರುತ್ತದೆ.
9. ಈ ಪ್ರಕರಣದಲ್ಲಿ ವಶಪಡಿಸಿಕೊಂಡಿರುವ ಆರೋಪಿಯ ರಿವಾಲ್ವರ್, ಡಿ.ಬಿ.ಬಿ.ಎಲ್. ಗನ್ ಮತ್ತು ಜೀವಂತ ಗುಂಡುಗಳನ್ನು ಪರೀಕ್ಷೆಗಾಗಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ತಜ್ಞರ ವರದಿ ಪಡೆಯಬೇಕಾಗಿರುತ್ತದೆ.
10. ಆರೋಪಿಯ ಕಚೇರಿಯಿಂದ ನಿಷೇಧಿತ ಜಿಂಕೆ ಚರ್ಮ ಮತ್ತು ಆಮೆಯ ಚಿಪ್ಪನ್ನು ವಶಪಡಿಸಿಕೊಳ್ಳಲಾಗಿದೆ. ಹೀಗಾಗಿ ಈ ವಿಚಾರದ ಬಗ್ಗೆ ಮುಂದಿನ ಕ್ರಮ ಜರುಗಿಸಲು ಅರಣ್ಯ ಇಲಾಖೆ ವಶಕ್ಕೆ ನೀಡಬೇಕಿದೆ. ಇವುಗಳ ಬಗ್ಗೆ ಆರೋಪಿಯು ವಿಚಾರಣೆಯ ಸಮಯದಲ್ಲಿ ಸರಿಯಾದ ಮಾಹಿತಿಯನ್ನು ನೀಡಿಲ್ಲ. ಹೀಗಾಗಿ ಇವುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವ ಅವಶ್ಯಕತೆ ಇರುವ ಕಾರಣ ಅಲ್ಲಿಯವರೆಗೂ ನ್ಯಾಯಾಂಗ ಬಂಧನದಲ್ಲಿರುವ ಅಗತ್ಯತೆ ಇರುತ್ತದೆ.
ಈ ಮೇಲ್ಕಂಡ ಕಾರಣಗಳಿಗೆ ಎ2 ಆರೋಪಿಯಾಗಿರುವ ರವಿಬೆಳಗೆರೆ ರವರನ್ನು ಡಿಸೆಂಬರ್ 11 ರಿಂದ ಡಿಸೆಂಬರ್ 24ರವರೆಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ನೀಡಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇವೆ.
https://www.youtube.com/watch?v=1XjJ-a_uFjI