– ಬಿಎಸ್‍ವೈ, ಸಿದ್ದರಾಮಯ್ಯಗೆ ಗುರುಬಲ ಇಲ್ಲರುವುದಕ್ಕೆ ಸಿಎಂ ಸೇಫ್
ಬೆಂಗಳೂರು: ಮೈತ್ರಿ ಸರ್ಕಾರದ ಉಳಿವಿಗಾಗಿ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರ ಪ್ರಯತ್ನ ಬಹು ಅವಶ್ಯಕವಾಗಿದೆ ಎಂದು ಆಚಾರ್ಯ ವಿಠ್ಠಲ್ ಭಟ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ರೇವಣ್ಣ ಅವರಿಗೆ ಮಾತ್ರ ಗುರುಬಲ ಉತ್ತಮವಾಗಿದೆ. ಹೀಗಾಗಿ ಸರ್ಕಾರದ ರಕ್ಷಣೆಯಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಸಚಿವರು ಸರ್ಕಾರ ರಕ್ಷಿಸುವ ಪ್ರಯತ್ನ ಮಾಡುತ್ತಿಲ್ಲ. ಒಂದು ವೇಳೆ ಪ್ರಯತ್ನಕ್ಕೆ ಮುಂದಾದರೆ ಯಾವುದೇ ಕಾರಣಕ್ಕೂ ಸರ್ಕಾರ ಬೀಳುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಸಿಎಂ ಕುಮಾರಸ್ವಾಮಿ ಅವರಿಗೆ ಈ ವರ್ಷದ ನವೆಂಬರ್ ವರೆಗೂ ಗುರುಬಲವಿಲ್ಲ. ಇತ್ತ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೂ ಗುರುಬಲವಿಲ್ಲ. ಇದರಿಂದಾಗಿ ಕುಮಾರಸ್ವಾಮಿ ಅವರ ಸಿಎಂ ಸ್ಥಾನ ಭದ್ರವಾಗಿದೆ. ಒಂದು ವೇಳೆ ಇಬ್ಬರಲ್ಲಿ ಯಾರಿಗಾದರೂ ಗುರುಬಲ ಸಿಕ್ಕಿದ್ದರೆ ಸರ್ಕಾರ ಇಷ್ಟೋತ್ತಿಗೆ ಬಿದ್ದು ಹೋಗುತ್ತಿತ್ತು. ಸದ್ಯದ ಬೆಳವಣಿಗೆ ಪ್ರಕಾರ ರಾಜ್ಯ ದೋಸ್ತಿ ಸರ್ಕಾರಕ್ಕೆ ಯಾವುದೇ ತೊಂದರೆಯಿಲ್ಲ ಎಂದು ನುಡಿದರು.
ಬಿ.ಎಸ್.ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಸ್ಥಾನದಲ್ಲಿ ಕುಳಿತುಕೊಳ್ಳುವ ಯೋಗ ಕೂಡಿಬಂದಿಲ್ಲ. ಈ ಯೋಗ ಕೂಡಿ ಬರಲು ಹೆಚ್ಚು ಕಾಲ ಬೇಕಾಗುತ್ತದೆ. ಇದೇ ಕುಮಾರಸ್ವಾಮಿ ಅವರಿಗೆ ಇರುವ ಪ್ಲಸ್ ಪಾಯಿಂಟ್. ಜೊತೆಗೆ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಮಾಡಿಸುತ್ತಿರುವುದು ಕೂಡ ಅವರ ಸ್ಥಾನಕ್ಕೆ ಭದ್ರತೆ ಒದಗಿಸಿದೆ. ಆದರೆ ಅವರ ಈಗಿನ ಪರಿಸ್ಥಿತಿ ಅಷ್ಟು ಉತ್ತಮವಾಗಿಲ್ಲ. ಕುಮಾರಸ್ವಾಮಿ ಅವರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕು ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv