ಚಿತ್ರದುರ್ಗ: “ನನ್ನ ತಮ್ಮ ಅರೆಸ್ಟ್ ಆದ ಚಿಂತೆಯಲ್ಲೇ ಅವನನ್ನು ಬಿಡಿಸಿಕೊಂಡು ಬನ್ನಿ ಅಂತ ತಂದೆ ಗೋಳಾಡಿದ್ದರು, ಅದೇ ಚಿಂತೆಯಲ್ಲಿ ಕೊನೆಯುಸಿರೆಳೆದರು. ನಿಜಕ್ಕೂ ನನ್ನ ನನ್ನ ತಮ್ಮ ಯಾವುದೇ ತಪ್ಪು ಮಾಡಿಲ್ಲ, ಬಡವರ ಮಕ್ಕಳೆಂದು ಅವನನ್ನ ಪ್ರಕರಣದಲ್ಲಿ ಸಿಲುಕಿಸಿದ್ದಾರೆ…” ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿ ಅನು ಅಲಿಯಾಸ್ ಅನಿಲ್ ಸಹೋದರಿಯ ನೋವಿನ ನುಡಿಗಳಿವು..
ಚಿತ್ರದುರ್ಗದಲ್ಲಿ (Chitradurga) ಮಾಧ್ಯಮಗಳ ಜೊತೆ ಮಾತನಾಡಿದ ಆರೋಪಿ ಅನು ಸಹೋದರಿ, ನನ್ನ ತಮ್ಮ ಅರೆಸ್ಟ್ ಆದ ಸುದ್ದಿ ಕೇಳಿ ನನ್ನ ತಂದೆ ಕಣೀರಿಟ್ಟಿದ್ದರು. ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಅವನನ್ನು ಬಿಡಿಸಿಕೊಂಡು ಬನ್ನಿ ಎಂದು ಗೋಳಾಡಿದ್ದರು. ಅದೇ ಚಿಂತೆಯಲ್ಲಿ ಮಲಗಿದವರು ಕೊನೆಯುಸಿರೆಳೆದಿದ್ದಾರೆ. ನನ್ನ ತಮ್ಮ ಯಾವುದೇ ತಪ್ಪು ಮಾಡಿಲ್ಲ. ಅವನು ನನ್ನ ಬಳಿ ಯಾವುದೇ ವಿಷಯವನ್ನೂ ಮುಚ್ಚಿಟ್ಟವನಲ್ಲ. ಬಡವರ ಮಕ್ಕಳೆಂದು ನನ್ನ ತಮ್ಮನನ್ನು ಈ ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದು ಕಣ್ಣೀರಿಟ್ಟಿದ್ದಾರೆ.
ಅನು ನಮ್ಮ ಜೊತೆಯಲ್ಲಿಯೇ ಇದ್ದರೂ ಯಾವುದೇ ವಿಷಯ ಹೇಳಿಲ್ಲ. ಟಿವಿ ನೋಡಿದ ಬಳಿಕವೇ ನಮಗೂ ವಿಷಯ ತಿಳಿದಿದೆ. ದಯವಿಟ್ಟು ಅವನ್ನು ಕರೆದುಕೊಂಡು ಬನ್ನಿ ಎಂದು ಅಳಲು ತೋಡಿಕೊಂಡಿದ್ದಾರೆ.
ಚಿತ್ರದುರ್ಗ ನಗರದಲ್ಲಿದ್ದ ಎ6 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ಹಾಗೂ ಎ7 ಆರೋಪಿ ಅನು ಅಲಿಯಾಸ್ ಅನಿಲ್ ಎಂಬ ಇಬ್ಬರು ಆರೋಪಿಗಳನ್ನ ಪೊಲಿಸರು ಶುಕ್ರವಾರ ಬೆಳಗ್ಗೆ ಬಂಧಿಸಿ ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಚಿತ್ರದುರ್ಗ ಡಿವೈಎಸ್ಪಿ ದಿನಕರ್ ನೇತೃತ್ವದಲ್ಲಿ ಆರೋಪಿಯನ್ನ ಬಂಧಿಸಲಾಗಿತ್ತು. ಬಳಿಕ ಕಾಮಾಕ್ಷಿಪಾಳ್ಯ ಪೊಲೀಸರು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದರು.
ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಹತ್ಯೆ ಪ್ರಕರಣದಲ್ಲಿ (Renukaswamy Murder Case) ದರ್ಶನ್ (Actor Darshan), ಗೆಳತಿ ಪವಿತ್ರಾ ಗೌಡ (Pavithra Gowda) ಸೇರಿದಂತೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಸದ್ಯ ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿದ್ದು, ವಿಚಾರಣೆ ನಡೆಯುತ್ತಿದೆ.