ಮಂಡ್ಯ: ಕೊಲೆ ಆರೋಪಿಯಾಗಿದ್ದ ಕುಮಾರ್ ಎಂಬ ವ್ಯಕ್ತಿಯನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಸಾಪ ಅಧ್ಯಕ್ಷನನ್ನಾಗಿ ಮಾಡಿದ್ದ ಕನ್ನಡ ಸಾಹಿತ್ಯ ಪರಿಷತ್ (Kannada Sahitya Parishat) ಇದೀಗ ಅಧ್ಯಕ್ಷ ಸ್ಥಾನದಿಂದ ತೆರವು ಮಾಡಿ ಆದೇಶ ಹೊರಡಿಸಿದೆ. ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ (Mahesh Joshi) ಆದೇಶ ಹೊರಡಿಸಿದ್ದಾರೆ.
ಈ ಬಾರಿ ಸಕ್ಕರೆ ನಾಡು ಮಂಡ್ಯದಲ್ಲಿ (Mandya) ಅಖಿಲ ಭಾರತೀಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಹಿನ್ನೆಲೆ ಸಿದ್ಧತೆಗೆ ಜಿಲ್ಲೆಯ ತಾಲೂಕು ಅಧ್ಯಕ್ಷರನ್ನು ನೇಮಕ ಮಾಡಲಾಗಿತ್ತು. ಶ್ರೀರಂಗಪಟ್ಟಣ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ತಮ್ಮ ಆಪ್ತನಾದ ಎಂ.ಬಿ ಕುಮಾರ್ ಅವರನ್ನು ಆಯ್ಕೆ ಮಾಡುವಂತೆ ಶಿಪಾರಸ್ಸು ಮಾಡಿದ್ದರು. ಇದನ್ನೂ ಓದಿ: ಶಿರೂರು ಗುಡ್ದ ಕುಸಿತ ದುರಂತ: ನಾಪತ್ತೆಯಾಗಿದ್ದ ಲಾರಿ ಚಾಲಕ ಅರ್ಜುನ್ ಶವ, ಲಾರಿ ಪತ್ತೆ
ಅದರಂತೆ ಕುಮಾರ್‌ನನ್ನು ಶ್ರೀರಂಗಪಟ್ಟಣದ ಅಧ್ಯಕ್ಷನನ್ನಾಗಿಯೂ ಕಸಾಪ ನೇಮಕ ಮಾಡಿತ್ತು. ಕುಮಾರ್ 2015ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ 30ನೇ ಆರೋಪಿಯಾಗಿದ್ದು, ಜಾಮೀನಿನ ಮೇಲೆ ಹೊರಗೆ ಇದ್ದಾನೆ. ಈ ಬಗ್ಗೆ ʻಪಬ್ಲಿಕ್ ಟಿವಿʼ ಸೆ.19ರಂದು ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇದನ್ನೂ ಓದಿ: ಕೊಲೆ ಆರೋಪಿಯನ್ನು ಕಸಾಪ ತಾಲೂಕು ಅಧ್ಯಕ್ಷನನ್ನಾಗಿ ಮಾಡಲು ಶಾಸಕ ಶಿಫಾರಸು
ಯಾವುದೇ ಕ್ರಿಮಿನಲ್ ಹಿನ್ನೆಲೆ ಉಳ್ಳ ವ್ಯಕ್ತಿಗೆ ಕಸಾಪದಲ್ಲಿ ಯಾವ ಹುದ್ದೆಗಳನ್ನು ನೀಡಬಾರದು ಎಂದು ಬೈಲಾದಲ್ಲಿ ಇದೆ. ಹೀಗಿದ್ದರೂ ಕೊಲೆ ಆರೋಪಿಯಾಗಿರುವ ಕುಮಾರ್‌ಗೆ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಶಿಫಾರಸ್ಸಿಗೆ ಮಣಿದು ಅಧ್ಯಕ್ಷ ಸ್ಥಾನ ಕೊಡಲಾಗಿದೆ ಎಂದು ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ಇದನ್ನೂ ಓದಿ: ಗಂಭೀರ ಆರೋಪಗಳಿರುವಾಗ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕು: ಸಂತೋಷ್ ಹೆಗ್ಡೆ
ವರದಿಯ ಬೆನ್ನಲ್ಲೇ ಕಸಾಪ ರಾಜ್ಯಾಧ್ಯಕ್ಷ ಮಹೇಶ್ ಜೋಶಿ ಈ ಬಗ್ಗೆ ಪೂರ್ವಪರ ವಿಚಾರ ಮಾಡಿ ಎಂ.ಬಿ ಕುಮಾರ್‌ನನ್ನು ಶ್ರೀರಂಗಪಟ್ಟಣ ತಾಲೂಕು ಅಧ್ಯಕ್ಷ ಸ್ಥಾನದಿಂದ ತೆರವುಗೊಳಿಸಿ ಆದೇಶ ಹೊರಡಿಸಿದ್ದಾರೆ. ಸದ್ಯ ಶ್ರೀರಂಗಪಟ್ಟಣ ಕಸಾಪ ತಾಲೂಕು ಅಧ್ಯಕ್ಷರಾಗಿ ಸಿದ್ದಲಿಂಗಯ್ಯ ಎಂಬುವವರನ್ನು ಆಯ್ಕೆ ಮಾಡಲಾಗಿದೆ.