ಒಂಟಿ ಮಹಿಳೆ ಕೊಲೆ ಪ್ರಕರಣ – ಆರೋಪಿಯ ತಾಯಿಯಿಂದ ಆತ್ಮಹತ್ಯೆ ಯತ್ನ

Public TV
1 Min Read
McGann Hospital

ಶಿವಮೊಗ್ಗ: ಶಿವಮೊಗ್ಗದಲ್ಲಿ  (Shivamogga) ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣದ ಪ್ರಮುಖ ಆರೋಪಿಯ ತಾಯಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗುರುವಾರ ನಡೆದಿದೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಸೀತಾಬಾಯಿ (50) ಎಂದು ಗುರುತಿಸಲಾಗಿದೆ. ನಗರದ ಹುಣಸೋಡು ನಿವಾಸಿಯಾದ ಮಹಿಳೆ ಅಬ್ಬಲಗೆರೆಯ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಆಕೆಯನ್ನು ರಕ್ಷಿಸಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಕೋಲಾರದಲ್ಲಿ ಮಹಿಳೆಯರ ಶಕ್ತಿ ಪ್ರದರ್ಶನ – ಸಾಲ ವಸೂಲಿಗೆ ಬಂದಿದ್ದಕ್ಕೆ ಬೈಕ್‍ಗೆ ಬೆಂಕಿ ಹಚ್ಚಿ ಆಕ್ರೋಶ

ಜೂನ್ 17ರಂದು ಶಿವಮೊಗ್ಗದ ವಿಜಯನಗರದಲ್ಲಿ ಎಂಜಿನಿಯರ್ ಒಬ್ಬರ ಪತ್ನಿ ಕಮಲಮ್ಮ ಎಂಬುವರ ಕೊಲೆ ನಡೆದಿತ್ತು. ಈ ಪ್ರಕರಣ ನಡೆದ ಮೇಲೆ ಕಾರು ಚಾಲಕ ಹನುಮಂತ ನಾಯ್ಕ ನಾಪತ್ತೆಯಾಗಿದ್ದ. ಕಮಲಮ್ಮ ಅವರನ್ನು ಕೊಲೆಗೈದು ಸುಮಾರು 35 ಲಕ್ಷ ರೂ. ಹಣವನ್ನು ದೋಚಿಕೊಂಡು ಹೋಗಿದ್ದಾನೆ ಎಂದು ಆತನ ವಿರುದ್ಧ ಎಫ್‍ಐಆರ್ ಕೂಡ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಕೊಲೆಗಾರನ ಸುಳಿವು ಪಡೆದ ಶಿವಮೊಗ್ಗ ತುಂಗಾನಗರ (Tunga Nagar) ಪೊಲೀಸರು ಆರೋಪಿ ಹನುಮಂತನಾಯ್ಕನ ಬೆನ್ನು ಬಿದ್ದಿದ್ದರು.

ಅಲ್ಲದೇ ಆರೋಪಿಯ ತಂದೆ ರೂಪ್ಲಾ ನಾಯ್ಕ ಕೂಡ ಮನೆ ಬಿಟ್ಟು ಪರಾರಿಯಾಗಿದ್ದ. ಇದರಿಂದ ಮನನೊಂದ ಸೀತಾಬಾಯಿ ಸಂಬಂಧಿಕರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯಕ್ಕೆ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಕೋಲಾರದಲ್ಲಿ ಮಹಿಳೆಯರ ಶಕ್ತಿ ಪ್ರದರ್ಶನ – ಸಾಲ ವಸೂಲಿಗೆ ಬಂದಿದ್ದಕ್ಕೆ ಬೈಕ್‍ಗೆ ಬೆಂಕಿ ಹಚ್ಚಿ ಆಕ್ರೋಶ

Share This Article