– ಪೊಲೀಸ್ ಜೀಪ್ ಧ್ವಂಸ, ಸಿಬ್ಬಂದಿಗೆ ಗಾಯ
ದಾವಣಗೆರೆ: ಲಾಕಪ್ ಡೆತ್ (Lockup Death) ಆರೋಪದ ಹಿನ್ನೆಲೆಯಲ್ಲಿ ಮೃತ ಆರೋಪಿಯ ಕುಟುಂಬಸ್ಥರು ಪೊಲೀಸ್ ಠಾಣೆಯ ಮೇಲೆ ಕಲ್ಲು ತೂರಾಟ (Stone Pelting) ನಡೆಸಿದ ಘಟನೆ ದಾವಣಗೆರೆ (Davanagere) ಜಿಲ್ಲೆಯ ಚನ್ನಗಿರಿಯಲ್ಲಿ (Channagiri) ನಡೆದಿದೆ.
ಮಟ್ಕಾ ಆಡಿಸುತ್ತಿದ್ದ ಆದಿಲ್ ಎಂಬ ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದ್ದಕ್ಕಿದ್ದಂತೆ ಆರೋಪಿಗೆ ಬಿಪಿ ಲೋ ಆದ ಹಿನ್ನೆಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರೋಪಿ ಆದಿಲ್ ಮೃತಪಟ್ಟಿದ್ದಾನೆ. ಪೊಲೀಸರ ಕಸ್ಟಡಿಯಲ್ಲಿ ಇರುವಾಗಲೇ ಆದಿಲ್ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಕುಟುಂಬಸ್ಥರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಭೂಮಿ ಮೇಲಿನ ಸ್ವರ್ಗ ಸೇಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸಿಗರಿಗೆ ನಿಷೇಧ
ಬಳಿಕ ಪ್ರತಿಭಟನೆ ವಿಕೋಪಕ್ಕೆ ತಿರುಗಿ ಕುಟುಂಬಸ್ಥರು ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಅಲ್ಲದೇ ಪೊಲೀಸ್ ಜೀಪನ್ನು ಧ್ವಂಸಗೊಳಿಸಿ, ಪಲ್ಟಿ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಘಟನೆಯಲ್ಲಿ ಪೊಲೀಸ್ ಸಿಬ್ಬಂದಿ ಕೂಡಾ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಕೆಆರ್‌ಎಸ್ ಡ್ಯಾಂನ ಒಳಹರಿವಿನಲ್ಲಿ ಹೆಚ್ಚಳ
ಇನ್ನು ಈ ಕುರಿತು ಎಸ್ಪಿ ಉಮಾ ಪ್ರಶಾಂತ್ ‘ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ್ದು, ಶುಕ್ರವಾರ ಪೊಲೀಸರು ಆದಿಲ್ ಎಂಬ ವ್ಯಕ್ತಿಯನ್ನು ಕರೆತಂದಿದ್ದರು. ಬಳಿಕ ಆತ ಕುಸಿದು ಬಿದ್ದ ಹಿನ್ನೆಲೆ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿ ವ್ಯಕ್ತಿ ಸಾವನ್ನಪ್ಪಿದ್ದಾನೆ. ಮೃತ ವ್ಯಕ್ತಿ ನಮ್ಮ ಪೊಲೀಸ್ ಠಾಣೆಯಲ್ಲಿ 6 ರಿಂದ 7 ನಿಮಿಷ ಕೂಡ ಇರಲಿಲ್ಲ. ಕುಟುಂಬಸ್ಥರು ಲಾಕಪ್ ಡೆತ್ ಎಂದು ಹೇಳುತ್ತಿದ್ದಾರೆ. ನಮ್ಮಲ್ಲಿ ಕೂಡ ಸಿಸಿ ಕ್ಯಾಮೆರಾ ಇದೆ. ಎಲ್ಲಾ ಪರಿಶೀಲನೆ ಮಾಡಲಾಗುತ್ತಿದೆ. ಪ್ರಾಮಾಣಿಕ ತನಿಖೆ ಮಾಡುತ್ತೇವೆ. ಮೃತರ ತಂದೆ ದೂರು ಕೊಟ್ಟಿದ್ದಾರೆ, ತನಿಖೆ ಆಗುತ್ತಿದೆ ಎಂದರು. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ- ಇಬ್ಬರು ಪೊಲೀಸ್ ಅಧಿಕಾರಿಗಳ ಅಮಾನತು
ಈಗಾಗಲೇ ಮೃತದೇಹವನ್ನು ದಾವಣಗೆರೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ. ಗಂಭೀರ ಪ್ರಕರಣ ಆದ ಹಿನ್ನೆಲೆ ನ್ಯಾಯಾಧೀಶರ ಸಮ್ಮುಖದಲ್ಲಿ ಶವ ಪರೀಕ್ಷೆ ಮಾಡಲಾಗುವುದು. ಈ ವಿಚಾರವಾಗಿ ಮೂರು ಪ್ರಕರಣ ದಾಖಲಾಗಿದೆ. 7 ಪೊಲೀಸ್ ವಾಹನ ಹಾಗೂ 11 ಜನ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ವಿಚಾರವಾಗಿ ಮೂರು ಪ್ರಕರಣ ಮತ್ತು ಮೃತನ ತಂದೆ ನೀಡಿದ ಒಂದು ಪ್ರಕರಣ ಸೇರಿ ಒಟ್ಟು ನಾಲ್ಕು ಪ್ರಕರಣ ದಾಖಲಾಗಿವೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ. 144 ಸೆಕ್ಷನ್ ಹಾಕಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಇಂದು ಭಾರೀ ಮಳೆ ಸಾಧ್ಯತೆ- ಕೇರಳದ 7 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್