ಮಂಡ್ಯ: ಕೃಷಿ ಪತ್ತಿನ ಸಹಕಾರ ಸಂಘದ (Agricultural Credit Cooperative Society) ಚುನಾವಣೆಯಲ್ಲಿ ತಮ್ಮ ಪಕ್ಷದ ಪರವಾಗಿ ಮತಹಾಕದೇ ಕಾಂಗ್ರೆಸ್ ಪಕ್ಷದ ಪರವಾಗಿ ಮತಹಾಕಿದ್ದಕ್ಕೆ ಜೆಡಿಎಸ್ ಕಾರ್ಯಕರ್ತರು ಅಟ್ಟಹಾಸ ಮೆರೆದು, ಯುವಕ ಹಾಗೂ ಯುವಕನ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿರುವ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲ (Nagamangala) ತಾಲ್ಲೂಕಿನ ಚೋಳೆನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಅಂದಹಾಗೆ ಸಕ್ಕರಿನಗರಿ ಮಂಡ್ಯ (Mandya) ಅಂದರೇ ರಾಜಕೀಯಕ್ಕೆ ಫೇಮಸ್. ಅದರಲ್ಲೂ ಗ್ರಾಮೀಣ ಭಾಗದಲ್ಲಿ ರಾಜಕಾರಣ ಹಾಸುಹೊದ್ದಿದೆ. ಆದರೆ ಸೊಸೈಟಿ ಚುನಾವಣೆಯಲ್ಲೂ ರಾಜಕೀಯ ಕೆಸರೆರಚಾಟ ಆರಂಭಗೊಂಡಿದ್ದು, ಲೋಕಲ್ ಫೈಟ್ ನಲ್ಲೂ ಡರ್ಟಿ ಪಾಲಿಟಿಕ್ಸ್ ನಡೆಯುತ್ತಿದೆ.
ಅಂದಹಾಗೆ ಕೆಲ ದಿನಗಳ ಕೆಳಗೆ ನಾಗಮಂಗಲ ತಾಲೂಕಿನ ಮುದ್ದಿನಹಟ್ಟಿ ಕೃಷಿ ಪತ್ತಿನ ಸಹಕಾರ ಸಂಘದ ಎಲೆಕ್ಷನ್ ಇತ್ತು. ಈ ವೇಳೆ ಚೋಳನಹಳ್ಳಿ ಗ್ರಾಮದ ವಿಕಾಸ್, ಕಾಂಗ್ರೆಸ್ ಪರವಾಗಿ ಚುನಾವಣೆ ಮಾಡಿದ್ದ. ಅಲ್ಲದೇ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಪರವಾಗಿ ಮತಚಲಾವಣೆ ಮಾಡಿದ್ದ. ಇದರಿಂದ ಕುಪಿತಗೊಂಡ ಗ್ರಾಮದ ಮಾಜಿ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಗೌಡ ಅಂಡ್ ಗ್ಯಾಂಗ್ ವಿಕಾಸ್ ಹಾಗೂ ಸಹೋದರ ರಘು ಎಂಬುವವರ ಮೇಲೆ ಹಲ್ಲೆ ನಡೆಸಿದ್ರು. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಆದರೆ ದೂರು ನೀಡಿದ್ರು ಎಂದು ಮತ್ತೆ ಕುಪಿತಗೊಂಡು ವಿಕಾಸ್ ಹಾಗೂ ಆಕೆಯ ತಂಗಿ ನೇತ್ರಾವತಿ ಎಂಬಾಕೆಯ ಮೇಲೆ ಕಲ್ಲಿನಿಂದ ಪ್ರಶಾಂತ್, ಪ್ರತಾಪ್, ರಾಜು, ಪ್ರಮೋದ್, ಹರೀಶ್ ಎಂಬುವವರು ಹಲ್ಲೆ ನಡೆಸಿದ್ದಾರೆ. ಇದರಿಂದಾಗಿ ನೇತ್ರಾವತಿ ತುಟಿ, ಹಲ್ಲಿನ ಭಾಗಕ್ಕೆ ಗಂಭೀರವಾದ ಗಾಯವಾಗಿದೆ.
ಇನ್ನು ಹಲ್ಲೆ ಮಾಡಿ ದೂರು ನೀಡಿದ ನಂತರ ಸಹಾ ವಿಕಾಸ್ ಕುಟುಂಬಕ್ಕೆ ಮಾಜಿ ಗ್ರಾಪಂ ಅಧ್ಯಕ್ಷ ಪ್ರಶಾಂತ್ ಗೌಡ, ಅವಾಜ್ ಹಾಕಿದ್ದಾನೆ. ಯಾರು ಏನೂ ಮಾಡಲು ಸಾಧ್ಯವಿಲ್ಲ ಎಂದು ಬೆದರಿಕೆ ಹಾಕಿದ್ದಾರೆ. ಹೀಗಾಗಿ ಪ್ರಾಣ ಭಯದಲ್ಲೇ ಇಡೀ ಕುಟುಂಬ ಕಾಲ ಕಳೆಯುತ್ತಿದೆ. ಇನ್ನು ಗಂಭೀರವಾಗಿ ಗಾಯಗೊಂಡಿರೋ ನೇತ್ರಾವತಿಗೆ ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ. ಈ ನಡುವೆ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಪ್ರಶಾಂತ್ ಗೌಡ ಸೇರಿದಂತೆ ಐವರು ಎಸ್ಕೇಪ್ ಆಗಿದ್ದಾರೆ. ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ. ಇನ್ನು ನಮಗೆ ನ್ಯಾಯಬೇಕು. ಕೇವಲ ಎಫ್‌ಐಆರ್ ಆದರೆ ಸಾಲದು ಆರೋಪಿಗಳನ್ನ ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಸ್ಥಳೀಯ ಚುನಾವಣೆಯಲ್ಲೂ ಡರ್ಟಿ ಪಾಲಿಟಿಕ್ಸ್ ಆರಂಭಗೊಂಡು ಒಬ್ಬರ ಮೇಲೆ ಒಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸುವ ಹಂತಕ್ಕೆ ತಲುಪಿರುವುದು ದುರಂತವೇ ಸರಿ.