– ಆರೋಪಿ ಎದೆಗೆ ಗುಂಡಿಟ್ಟ ಲೇಡಿ ಪಿಎಸ್‌ಐ
ಹುಬ್ಬಳ್ಳಿ: 5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಕೊಲೆ ಮಾಡಿದ ಪ್ರಕರಣದ ಆರೋಪಿಯು ಪೊಲೀಸರ ಗುಂಡೇಟಿಗೆ ಬಲಿಯಾಗಿದ್ದಾನೆ.
ಬಿಹಾರ ಮೂಲದ ಆರೋಪಿ ರಿತೇಶ್ ಕುಮಾರ್ ಗುಂಡೇಟಿಗೆ ಸಾವನ್ನಪ್ಪಿದ ಆರೋಪಿ. ಮಹಿಳಾ ಪಿಎಸ್‌ಐ ಗುಂಡೇಟು ನೀಡಿದ್ದರು. ಎದೆಗೆ ಗುಂಡು ತಾಗಿ ತೀವ್ರವಾಗಿ ಗಾಯಗೊಂಡಿದ್ದ ಆರೋಪಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆ.
ಪ್ರಕರಣ ಕುರಿತು ಪ್ರತಿಕ್ರಿಯೆ ನೀಡಿದ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್, ಬೆಳಗ್ಗೆ ಹುಬ್ಬಳ್ಳಿ ಅಶೋಕ ನಗರ ವಿಜಯನಗರ ಬಳಿ ಮಗು ಮಿಸ್ ಆಗಿದೆ ಎಂದು ಮಾಹಿತಿ ಇತ್ತು. ಪ್ರಕರಣದ ಆರೋಪಿ ಬಿಹಾರ ಮೂಲದ ಪಾಟ್ನಾದವನು. ಹುಬ್ಬಳ್ಳಿ ತಾರಿಹಾಳರ ಬಳಿ ಮನೆ ಮಾಡಿಕೊಂಡಿದ್ದ. ಆರೋಪಿ ನಮ್ಮ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ. ಮಹಿಳಾ ಪೊಲೀಸ್ ಅಧಿಕಾರಿ ಏರ್ ಫೈಯರ್ ಮಾಡಿದ್ದರು. ಆತ ಓಡಿ ಹೋಗುವಾಗ ಎರಡು ಗುಂಡು ಆತನ ಮೇಲೆ ಹಾರಿಸಲಾಗಿತ್ತು. ಆಗ ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ರವಾನೆ ಮಾಡಿದ್ದರು. ಆತ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಪಿಎಸ್‌ಐ ಅನ್ನಪೂರ್ಣ ಹಾಗೂ ಇಬ್ಬರು ಸಿಬ್ಬಂದಿಗೆ ಗಾಯವಾಗಿದೆ. ಕೊಲೆ ಪ್ರಕರಣ ದಾಖಲು ಮಾಡಿಕೊಂಡಿದ್ದೆವು ಎಂದು ಮಾಹಿತಿ ನೀಡಿದ್ದಾರೆ.
ವಿಚಾರಣೆ ವೇಳೆ ಆರೋಪಿಯು ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಆತನ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ. ಕಮಿಷನರ್ ಶಶಿಕುಮಾರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡಿದ್ದ ಪಿಎಸ್‌ಐ ಅನ್ನಪೂರ್ಣ ಹಾಗೂ ಪೇದೆ ಆರೋಗ್ಯ ವಿಚಾರಿಸಿದ್ದಾರೆ.
ಪ್ರಕರಣ ಏನು?
ಮನೆ ಬಳಿ ಆಟವಾಡುತ್ತಿದ್ದ 5 ವರ್ಷದ ಬಾಲಕಿಗೆ ತಿಂಡಿ ಕೊಡಿಸುವ ಆಸೆ ತೋರಿಸಿ ಸೈಕೋಪಾತ್ ರಿತೇಶ್ ಕುಮಾರ್ ಆಕೆಯನ್ನು ಎತ್ತಿಕೊಂಡು ಹೋಗಿದ್ದ. ಬಾಲಕಿಯನ್ನು ಆರೋಪಿ ಕರೆದುಕೊಂಡು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬಳಿಕ ಶೆಡ್‌ವೊಂದಕ್ಕೆ ಮಗು ಕರೆದುಕೊಂಡು ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಗು ಕಿರುಚಿಕೊಂಡಿದೆ. ಮಗು ಚೀರಾಟ ಕೇಳಿ ಅಕ್ಕಪಕ್ಕದಲ್ಲಿದ್ದವರು ಸ್ಥಳಕ್ಕೆ ಧಾವಿಸಿದ್ದರು.
ಜನರು ಬರುತ್ತಿರುವುದನ್ನು ಕಂಡು ಆರೋಪಿಯು ಮಗುವಿನ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಕೃತ್ಯ ಖಂಡಿಸಿ ಸ್ಥಳೀಯರು ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.