ಕೊಪ್ಪಳ: ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯೊಬ್ಬ ದೂರು ದಾಖಲಾಗುತಿದ್ದಂತೆಯೇ ಪರಾರಿಯಾಗಿದ್ದನು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು. ವರದಿಯಿಂದ ಎಚ್ಚೆತ್ತ ಕೊಪ್ಪಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕೊಪ್ಪಳದ ಕಾರಟಗಿ ಪೊಲೀಸರು ಆರೋಪಿ ಶರಣಪ್ಪ ಕೊತ್ವಾಲ್ ನನ್ನು ಬಂಧಿಸಿದ್ದಾರೆ. ಆರೋಪಿ ಬಂಧನಕ್ಕಾಗಿ ಪಿಎಸ್‍ಐ ಶರತ್ ಕುಮಾರ್ ನೇತೃತ್ವದಲ್ಲಿ ಬಲೆ ಬೀಸಲಾಗಿತ್ತು. ಇದೀಗ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಕೊಪ್ಪಳದಲ್ಲಿ ಹುಡುಕಾಟ- ಪಕ್ಕದ ಗದಗದಲ್ಲಿ ಪೊಲೀಸರ ಜೊತೆ ಆರೋಪಿಯ ಪಾರ್ಟಿ
ಕೊಪ್ಪಳದ ಕಾರಟಗಿ ತಾಲೂಕಿನ ಬುದೂಗೂಂಪ ನಿವಾಸಿಯಾದ ಶರಣಪ್ಪ ಕೊತ್ವಾಲ್ ವಿರುದ್ಧ ಕೊಲೆ ಯತ್ನಕ್ಕೆ ಸಂಬಂಧಿಸಿದಂತೆ ಹತ್ತಿರದ ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾಗುತಿದ್ದಂತೆಯೇ ಆರೋಪಿ ಶರಣಪ್ಪ ಕೊತ್ವಾಲ್ ತಲೆಮರೆಸಿಕೊಂಡಿದ್ದನು. ಈ ಕಡೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನೆಡಸಿದ್ದರು.
ಇತ್ತೀಚೆಗೆ ಆರೋಪಿ ಶರಣಪ್ಪ ಕೊತ್ವಾಲ್ ಗದಗ ಜಿಲ್ಲೆಯ ಗಜೇಂದ್ರ ಗಡದ ಪಿ.ಎಸ್.ಐ ರಾಮಣ್ಣ ಅವರ ಜೋತೆ ಇರುವ ಫೋಟೋ ವೈರಲ್ ಆಗಿತ್ತು. ಫೋಟೊದಲ್ಲಿ ಆರೋಪಿ ಶರಣಪ್ಪ ಕೊತ್ವಾಲ್, ಬಾಗಲಕೋಟೆ ಭೂ ಮತ್ತು ಗಣಿ ಇಲಾಖೆ ಅಧಿಕಾರಿ ಕೃಷ್ಣ ವೇಣಿ ಮತ್ತು ಕೊಪ್ಪಳದ ಮಹಿಳಾ ಆಯೋಗದ ಸದಸ್ಯೆ ಮಾಲತಿ ನಾಯಕ್ ಕಾಣಿಸಿಕೊಂಡಿದ್ದರು.
ಮಾಲತಿ ನಾಯಕ್ ಅವರ ಬರ್ತ್ ಡೇ ಕಾರ್ಯಕ್ರಮದಲ್ಲಿ ಆರೋಪಿ ಭಾಗಿಯಾಗಿರುವ ಖಚಿತ ಮಾಹಿತಿ ಆಧರಿಸಿ ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾಗಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಎಚ್ಚೆತ್ತ ಕೊಪ್ಪಳ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಇಷ್ಟು ದಿನ ತಲೆಮರೆಸಿಕೊಂಡಿದ್ದ ಆರೋಪಿ ಇದೀಗ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾನೆ.