ತುಮಕೂರು: ವ್ಯಕ್ತಿಯೊಬ್ಬನನ್ನು ಬರ್ಬರವಾಗಿ ಕೊಲೆಗೈದು 30 ಮೇಕೆಗಳನ್ನು ಕದ್ದೊಯ್ದಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಮಣಿಕಂಠ ಎಂದು ಗುರುತಿಸಲಾಗಿದೆ. ಆರೋಪಿ ಪಾವಗಡ (Pavagada) ತಾಲೂಕಿನ ದೇವಲಕೆರೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ನರಸಿಂಹಪ್ಪ (60) ಎಂಬಾತನನ್ನು ಮಚ್ಚಿನಿಂದ ಕೊಚ್ಚಿ ಕೊಲೆಗೈದಿದ್ದ. ಬಳಿಕ 30 ಮೇಕೆಗಳನ್ನು ಕದ್ದುಕೊಂಡು ಹೋಗಿದ್ದ.
ಕದ್ದ ಮೇಕೆಗಳನ್ನು ಚಿತ್ರದುರ್ಗದ ಹಿರಿಯೂರಿನ ಕುರಿಸಂತೆಯಲ್ಲಿ ಮಾರಾಟಕ್ಕೆ ಯತ್ನಿಸಿದ್ದ. ಮೇಯಲು ಹೋಗಿದ್ದ ಮೇಕೆಗಳು ಮತ್ತು ನರಸಿಂಹಪ್ಪ ಮನೆಗೆ ಬಾರದಿದ್ದಕ್ಕೆ ಕುಟುಂಬಸ್ಥರ ಹುಡುಕಾಟ ನಡೆಸಿದ್ದರು.
ಅನುಮಾನದಿಂದ ನರಸಿಂಹಪ್ಪ ಪುತ್ರ ಹಿರಿಯೂರು ಸಂತೆಗೆ ತೆರಳಿ ನೋಡಿದಾಗ, ಮೇಕೆಗಳ ಸಮೇತ ಸಂತೆಯಲ್ಲಿ ಆರೋಪಿ ಮಣಿಕಂಠ ಸಿಕ್ಕಿಬಿದ್ದಿದ್ದ. ಈ ವೇಳೆ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿತ್ತು. ತನಿಖೆ ವೇಳೆ ಮೇಕೆಗಳಿಗಾಗಿ ಕೊಲೆ ಮಾಡಿರುವುದಾಗಿ ಆರೋಪಿ ಬಾಯಿ ಬಿಟ್ಟಿದ್ದ.
ಪೊಲೀಸರು ಸ್ಥಳ ಮಹಜರಿಗೆ ಆರೋಪಿಯನ್ನು ಕರೆದೊಯ್ದಾಗ, ಅರಣ್ಯ ಪ್ರದೇಶದಲ್ಲಿ ಕೊಲೆ ಮಾಡಿ ಎಸೆದಿದ್ದ ಮೃತ ದೇಹವನ್ನು ತೋರಿಸಿದ್ದಾನೆ. ಈ ಸಂಬಂಧ ಅರಸಿಕೆರೆ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.