ಮಡಿಕೇರಿ: ಕಂದಾಯ ಇಲಾಖೆಯ ನಿರೀಕ್ಷಕರ ಬಳಿ ಖದಿಮರಿಬ್ಬರು, ನಾವು ಸಚಿವ ಬೋಸರಾಜ್ (S Bosaraju) ಅವರ ಕಚೇರಿಯಿಂದ ಕರೆ ಮಾಡುತ್ತಾ ಇದ್ದೇವೆ. ನಾವು ಅವರ ಆಪ್ತಸಹಾಯಕರು. ತುರ್ತಾಗಿ 20 ಸಾವಿರ ಹಣವನ್ನು ಗೂಗಲ್ ಪೇ (Google Pay) ಮಾಡಿ ನಂತರ ನಿಮ್ಮ ಹಣವನ್ನು ಸ್ವಲ್ಪ ಸಮಯದ ನಂತರ ವಾಪಸ್ ಮಾಡುವುದಾಗಿ ತಿಳಿಸಿದ್ದಾರೆ. ಬಳಿಕ ಹಣವನ್ನು ವಾಪಸ್ ಮಾಡದೇ ಇದೀಗ ಇಬ್ಬರು ವ್ಯಕ್ತಿಗಳು ಪೊಲೀಸರ ಅಥಿತಿಯಾಗಿರುವ ಘಟನೆ ಕೊಡಗು ಜಿಲ್ಲೆಯಲ್ಲಿ ನಡೆದಿದೆ.
ಕುಶಾಲನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸಂತೋಷ್.ಹೆಚ್.ಎನ್ ಕುಶಾಲನಗರ (Kushalanagar) ತಾಲೂಕಿನ ಕಂದಾಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ನವಂಬರ್ 19 ರಂದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಸಂತೋಷ್ ಮೊಬೈಲ್‍ಗೆ ಕರೆ ಮಾಡಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಸಹಾಯಕ ತಾನು ಎಂದು ಹೇಳಿ ತುರ್ತಾಗಿ ರೂ. 20,000ಗಳ ಹಣದ ಅವಶ್ಯಕತೆಯಿದ್ದು, ಗೂಗಲ್ ಪೇ ಮೂಲಕ ಕಳುಹಿಸುವಂತೆ ಹಾಗೂ ಹಣವನ್ನು ಆದಷ್ಟು ಬೇಗ ಹಿಂದಿರುಗಿಸುವುದಾಗಿ ಹೇಳಿದ್ದಾರೆ.
ಈ ಹಿನ್ನೆಲೆಯಲ್ಲಿ ತುರ್ತು ಸಂದರ್ಭ ಇರಬಹುದು ಎಂದು ತಿಳಿದ ಸಂತೋಷ್, ಅಪರಿಚಿತ ವ್ಯಕ್ತಿಗೆ ರೂ.20 ಸಾವಿರ ಹಣವನ್ನು ಗೂಗಲ್ ಪೇ ಮೂಲಕ ಕಳುಹಿಸಿದ್ದಾರೆ. ಹಣ ಬೆಳಗ್ಗೆ ಆದರೂ ಬರದೇ ಇರುವಾಗ ಅನುಮಾನಗೊಂಡು ನಂತರ ಕಂದಾಯಾಧಿಕಾರಿ ಸಂತೋಷ್ ಈ ಕುರಿತು ನ.20ರಂದು ಸಚಿವರ ಕಛೇರಿಯಲ್ಲಿ ವಿಚಾರಿಸಿದಾಗ ಹಣ ಕೇಳಿದ ವ್ಯಕ್ತಿ ಹಾಗೂ ಮೊಬೈಲ್ ಸಂಖ್ಯೆಗೆ ಬಗ್ಗೆ ಯಾವುದೇ ಮಾಹಿತಿ ಇರುವುದಿಲ್ಲ ಎಂದು ಸಚಿವರ ಕಛೇರಿ ಮೂಲಗಳು ಸ್ಪಷ್ಟಪಡಿಸಿದವು. ಕೂಡಲೇ ಸಂತೋಷ್ ಅವರು ಕುಶಾಲನಗರ ಪೊಲೀಸರಿಗೆ ದೂರು ನೀಡಲು ಮುಂದಾದರು ದೂರು ಸ್ವೀಕರಿಸಿದ ಆರ್.ವಿ ಗಂಗಾಧರಪ್ಪ, ಡಿಎಸ್ಪಿ, ಸೋಮವಾರಪೇಟೆ ಉಪವಿಭಾಗ, ಪ್ರಕಾಶ್.ಬಿ.ಜಿ, ಪಿಐ ಹಾಗೂ ಗೀತಾ, ಪಿಎಸ್‍ಐ ಕುಶಾಲನಗರ ನಗರ ಪೊಲೀಸ್ ಠಾಣೆ, ಕಾಶಿನಾಥ ಬಗಲಿ, ಪಿಎಸ್‍ಐ, ಕುಶಾಲನಗರ ಸಂಚಾರಿ ಪೊಲೀಸ್ ಠಾಣೆ ಮತ್ತು ಸಿಬ್ಬಂದಿ ಅವರುಗಳ ತಂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ.
ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಮತ್ತು ಸಾಕ್ಷ್ಯಾಧರಗಳನ್ನು ಕಲೆಹಾಕಿ ತನಿಖೆ ಕೈಗೊಂಡು, ವಿಳಂಬರಹಿತವಾಗಿ ನವಂಬರ್ 22 ರಂದು ಆರೋಪಿಗಳಾದ ಮೈಸೂರು ನಿವಾಸಿ ರಘುನಾಥ, 34 ವರ್ಷ ಮತ್ತು ಶಿವಮೂರ್ತಿ, 35 ವರ್ಷ ಎಂಬವರನ್ನು ವಿಚಾರಣೆಯನ್ನು ನಡೆಸುತ್ತಿದ್ದಾರೆ.