– ʻಪಬ್ಲಿಕ್ ಟಿವಿʼ ವರದಿ ಬೆನ್ನಲ್ಲೇ ಕೆಎಸ್‌ಆರ್‌ಟಿಸಿ ಸ್ಪಷ್ಟನೆ
ಚಾಮರಾಜನಗರ: ಕೆಎಸ್‌ಆರ್‌ಟಿಸಿ ಚಾಲಕರ (KSRTC Driver) ಹುದ್ದೆ ಹೊರಗುತ್ತಿಗೆ ನೌಕರಿಯಲ್ಲಿ ಲಂಚ ಕೊಟ್ಟವರಿಗೆ ಕೆಲಸ ಕೊಡುತ್ತಿದ್ದಾರೆ ಎಂಬ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ. ಅಲ್ಲದೇ ಪನ್ನಗ ಎಂಟರ್ ಪ್ರೈಸಸ್ (Pannaga Enterprises) ಏಜೆನ್ಸಿ ವಿರುದ್ಧ ನೋಟೀಸ್ ಜಾರಿಗೊಳಿಸಿದ್ದು, ನಿಮ್ಮ ಏಜೆನ್ಸಿ ಅವರೊಂದಿಗೆ ಮಾಡಿಕೊಂಡಿರುವ ಕರಾರು ಒಪ್ಪಂದವನ್ನ ಏಕೆ ರದ್ದುಗೊಳಿಸಬಾರದು? ಈ ಬಗ್ಗೆ ಸೂಕ್ತ ಸಮಜಾಯಿಷಿ ನೀಡುವಂತೆ ಸೂಚಿಸಿದೆ.
KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಚಾಮರಾಜನಗರ ಬಸ್ ನಿಲ್ದಾಣದಲ್ಲಿ ಚಾಲಕನೊಬ್ಬ ಮಾತನಾಡಿರುವ ವೀಡಿಯೋ ವೈರಲ್ ಆಗಿತ್ತು. ಈ ಬಗ್ಗೆ ʻಪಬ್ಲಿಕ್ ಟಿವಿʼ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಎಚ್ಚೆತ್ತ ಕೆಎಸ್‌ಆರ್‌ಟಿಸಿ ಸ್ಪಷ್ಟನೆ ನೀಡಿದೆ. ಇದನ್ನೂ ಓದಿ: 30,000 ಕೊಟ್ರೆ ಕೆಲಸ, 40,000 ಕೊಟ್ರೆ ಟ್ರ‍್ಯಾಕ್ ಟೆಸ್ಟ್ ಪಾಸ್ – KSRTC ಚಾಲಕರ ಹೊರಗುತ್ತಿಗೆ ನೌಕರಿಯಲ್ಲೂ ಗೋಲ್ಮಾಲ್?
ನೋಟಿಸ್‌ನಲ್ಲಿ ಏನಿದೆ?
ಕೆಎಸ್‌ಆರ್‌ಟಿಸಿ ನಿಗಮದ ಚಾಮರಾಜನಗರ ವಿಭಾಗದಲ್ಲಿ ಚಾಲಕರ ಹೊರಗುತ್ತಿಗೆಯ ನಿಯೋಜನೆಯಲ್ಲಿ ಆಕ್ರಮ ವ್ಯವಹಾರ ನಡೆಯುತ್ತಿದೆ ಎಂಬ ಸುದ್ದಿಗೂ ಕೆಎಸ್‌ಆರ್‌ಟಿಸಿಗೂ ಯಾವುದೇ ಸಂಬಂಧವಿರುವುದಿಲ್ಲ.
KSRTC ಗೆ ಪನ್ನಗ ಏಜೆನ್ಸಿ ಹೊರಗುತ್ತಿಗೆ ಚಾಲಕರ ಸೇವೆ ಒದಗಿಸುತ್ತಿದೆ. ಚಾಮರಾಜನಗರ ಡಿಪೋಗೆ 125 ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನಿಯೀಜಿಸಲು ಒಪ್ಪಂದವಾಗಿದೆ. ಆದ್ರೆ ಹೊರಗುತ್ತಿಗೆ ಮೇಲೆ ಚಾಲರನ್ನು ನಿಯೋಜಿಸಲು 30 ರಿಂದ 40,000 ರೂ. ವರೆಗೆ ಹಣ ಪಡೆಯುತ್ತಿದ್ದಾರೆ, ಅಲ್ಲದೇ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸದೇ ಇರುವವರನ್ನೂ ಹಣ ಪಡೆದು ಹೊರಗುತ್ತಿಗೆ ಮೇಲೆ ಚಾಲಕರಾಗಿ ನಿಯೋಜಿಸಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಬಹು ಅಂಗಾಂಗ, ಕಿಡ್ನಿ ವೈಫಲ್ಯದಿಂದ ಬಾಣಂತಿಯರ ಸಾವು – ದಿನೇಶ್ ಗುಂಡೂರಾವ್ ಉತ್ತರ
KSRTC ನಿಗಮದ ಕರಾರು ಒಪ್ಪಂದ ಷರತ್ತು ಮತ್ತು ನಿಬಂಧನೆಗಳಲ್ಲಿ ಹೊರಗುತ್ತಿಗೆ ಚಾಲಕರನ್ನು ನಿಯೋಜಿಸುವ ವೇಳೆ ಹಣ ಪಡೆಯುವಂತಿಲ್ಲ. ಅಲ್ಲದೇ ಚಾಲನಾ ಅರ್ಹತಾ ಪರೀಕ್ಷೆಯಲ್ಲಿ ಭಾಗವಹಿಸಿ, ತೇರ್ಗಡೆ ಹೊಂದಿದವರನ್ನು ಮಾತ್ರ ನಿಯೋಜಿಸಲಾಗುತ್ತಿದೆ. ಆದಾಗ್ಯೂ ನಿಮ್ಮದೇ ಹೊರಗುತ್ತಿಗೆ ಚಾಲಕರಿಂದ ಹಣ ಪಡೆದು ನಿಯೋಜಿಸುತ್ತಿರುವ ಬಗ್ಗೆ ವರದಿಯಾಗಿದೆ. ಆರೋಪ ಹಿನ್ನಲೆ ನಿಮ್ಮ ಏಜೆನ್ಸಿಯವರೊಂದಿಗೆ ಮಾಡಿಕೊಂಡಿರುವ ಕರಾರು ಒಪ್ಪಂದವನ್ನು ಏಕೆ ರದ್ದುಗೊಳಿಸಬಾರದು? ಎಂಬುದರ ಬಗ್ಗೆ ಸೂಕ್ತ ಸಮಜಾಯಿಷಿಯನ್ನು ಕೂಡಲೇ ನೀಡಿ, ಕಚೇರಿಗೆ ಕಳುಹಿಸಬೇಕು ಎಂದು ತಿಳಿಸಿದೆ.
ಮುಂದುವರಿದು ಪ್ರಯಾಣಿಕರ ಸುರಕ್ಷತೆಯಲ್ಲಿ ರಾಜಿ ಇರುವುದಿಲ್ಲ. ನೇಮಕಾತಿ ವೇಳೆ ಅಭ್ಯರ್ಥಿಗೂ, ನಿಗಮಕ್ಕೂ ನೇರವಾಗಿ ಯಾವುದೇ ಪತ್ರ ವ್ಯವಹಾರ ನಡೆಯುದಿಲ್ಲವೆಂದು ಸಾರಿಗೆ ಅಧಿಕಾರಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ಡ್ರೈವರ್‌ಗಳು ಪನ್ನಗ ಏಜೆನ್ಸಿ ಮೂಲಕವೇ ನೇಮಕ ಆಗಿದ್ದಾರೆ ಎಂದು ಚಾಮರಾಜನಗರದ ವಿಭಾಗೀಯ ನಿಯಂತ್ರಣಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ. ಇದನ್ನೂ ಓದಿ: NDA ಸರ್ಕಾರದ ಅವಧಿಯಲ್ಲಿ ಕರ್ನಾಟಕಕ್ಕೆ ಅತಿಹೆಚ್ಚು 2.08 ಲಕ್ಷ ಕೋಟಿ ಅನುದಾನ: ಸಂಸದ ಕೆ.ಸುಧಾಕರ್