ಬೆಂಗಳೂರು: ಆಕಸ್ಮಿಕವಾಗಿ ಬೆಂಕಿ ಹೊತ್ತಿ ಸಂಪೂರ್ಣ ಮನೆಯೊಂದು ಬೆಂಕಿಗಾಹುತಿಯಾಗಿರುವ ಘಟನೆ ನಗರದ ಹೊರವಲಯ ನೆಲಮಂಗಲ ತಾಲೂಕಿನ ಹೊನ್ನೇನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ರೈತ ಬೆಟ್ಟಯ್ಯ ಎಂಬುವರಿಗೆ ಸೇರಿದ ಮನೆ ಇದಾಗಿತ್ತು. ಬೇಸಿಗೆ ಆರಂಭದಲ್ಲಿ ಜಾನುವಾರುಗಳಿಗೆ ಸಂಗ್ರಹಿಸಿದ್ದ ಹುಲ್ಲಿನ ಬಣವೆಗೆ ಬೆಂಕಿ ತಗುಲಿದೆ. ನಂತರ ರೈತನ ಮನೆಯನ್ನ ಬೆಂಕಿ ಆವರಿಸಿ ನೋಡುನೋಡುತ್ತಲೇ, ಮನೆ ಸಂಪೂರ್ಣವಾಗಿ ಬೆಂಕಿಗಾಹುತಿಯಾಗಿದ್ದು, ಘಟನೆಯಿಂದ ರೈತ ಕುಟುಂಬ ಕಂಗಾಲಾಗಿದೆ. ಇನ್ನೂ ಈ ಘಟನೆಗೆ ಕಾರಣ ಮನೆಯ ಪಕ್ಕದಲ್ಲಿದ್ದ ಹುಲ್ಲಿನ ಬಣವೆಗೆ ಬೆಂಕಿ ತಗುಲಿದ ನಂತರ ಮನೆಗೆಲ್ಲಾ ವ್ಯಾಪಿಸಿದೆ. ಇದನ್ನೂ ಓದಿ: ಸಮಾನತೆಯ ಸಂದೇಶದೊಂದಿಗೆ ವಿದ್ಯಾರ್ಥಿನಿಯರಿಂದ ಬೈಕ್ ರ‍್ಯಾಲಿ
ಅದೃಷ್ಟವಶಾತ್ ಯಾವುದೇ ಅವಗಢ ಸಂಭವಿಸಿಲ್ಲ. ಮನೆಯಲ್ಲಿದ್ದ ವಸ್ತುಗಳು ಸುಟ್ಟು ಕರಕಲಾಗಿದೆ. ನಂತರ ನೆಲಮಂಗಲ ಅಗ್ನಿಶಾಮಕ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಬೆಂಕಿ ತಹಬದಿಗೆ ತರಲಾಯಿತು. ಡಾಬಸ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.