ಯಾದಗಿರಿ: ಗುಜರಿ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ಗುಜರಿ ಸಾಮಾನು ಸುಟ್ಟು ಕರಕಲಾಗಿರುವ ಘಟನೆ ನಗರದ ಮುಸ್ಲಿಂಪುರಾ ಬಡಾವಣೆಯಲ್ಲಿ ನಡೆದಿದೆ.
ಅಂಗಡಿಯಲ್ಲಿ ಎರಡ್ಮೂರು ಘಂಟೆಗಳ ಕಾಲ ಭೀಕರವಾಗಿ ಅಗ್ನಿ ಆವರಿಸಿದ ಪರಿಣಾಮ ಪಕ್ಕದಲ್ಲಿರುವ ಮೂರು ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ. ಬಡಾವಣೆ ಸುತ್ತಲು ಬೆಂಕಿ ಕಿಡಿಗಳ ದಟ್ಟನೆಯಿಂದ ಕೆಲಕಾಲ ಬಡಾವಣೆಯ ಜನರು ಆತಂಕದಲ್ಲಿದ್ದರು. ಸ್ಥಳಕ್ಕೆ ಎರಡು ಅಗ್ನಿಶಾಮಕ ದಳದ ವಾಹನ ಆಗಮಿಸಿ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
Advertisement
ಅಬ್ದುಲ್ ರಹಿಮಾನ್ ಸೇರಿದ ಗುಜರಿ ಅಂಗಡಿ ಸೇರಿದಂತೆ ಕಿರಾಣ, ಕ್ಷೌರಿಕ ಹಾಗೂ ಕಟ್ಟಿಗೆಯ ಅಂಗಡಿಗೆ ಬೆಂಕಿ ಆವರಿಸಿದ್ದರಿಂದ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗೆ ಸುಟ್ಟು ಭಸ್ಮವಾಗಿವೆ. ಈ ಅವಘಡವು ಶಾರ್ಟ್ ಸರ್ಕಿಟ್ ನಿಂದ ಸಂಭವಿಸಿದೆ ಅಂತ ಬಡಾವಣೆ ಜನರು ಅನುಮಾನ ವ್ಯಕ್ತಪಡಿಸಿದ್ದಾರೆ.
Advertisement
ಬಡಾವಣೆ ಸುತ್ತಲೂ ವಿದ್ಯುತ್ ಸರಬರಾಜು ಸ್ಥಗಿತಗೊಳಿಸಲಾಗಿದೆ. ಘಟನಾ ಸ್ಥಳಕ್ಕೆ ಯಾದಗಿರಿ ಶಾಸಕ ವೆಂಕಟರೆಡ್ಡಿ ಮುದ್ನಾಳ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಹೋಗಿರುವುದರಿಂದ ಅಂಗಡಿ ಮಾಲೀಕರಿಗೆ ಪರಿಹಾರ ಕಲ್ಪಿಸಿಕೊಡುವ ಭರವಸೆಯನ್ನು ಶಾಸಕರು ನೀಡಿದ್ದಾರೆ.