ಮಂಡ್ಯ: ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ (Bengaluru Mysuru Expressway) ಮಂಗಳವಾರ ಮತ್ತೆ ಭೀಕರ ಅಪಘಾತವೊಂದು (Accident) ಸಂಭವಿಸಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ಒಬ್ಬರ ಸ್ಥಿತಿ ಗಂಭೀರವಾಗಿದೆ.
ಮಂಡ್ಯ (Mandya) ಜಿಲ್ಲೆಯ ಮದ್ದೂರು ತಾಲೂಕಿನ ಗಜ್ಜಲೆಗೆರೆ ಬಳಿ ಭೀಕರ ಅಪಘಾತ ಸಂಭವಿಸಿದೆ. ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ಕಾರು ಟಾಟಾ ಹೆಕ್ಸಾ ಕಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಡಿಸೈರ್ ಕಾರಿನಲ್ಲಿದ್ದ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಅಪಘಾತದಲ್ಲಿ ಮೃತಪಟ್ಟ ಒಬ್ಬರು ನೀರಜ್ ಕುಮಾರ್ ಎಂದು ಗುರುತಿಸಲಾಗಿದೆ. ಅವರು ಉತ್ತರ ಪ್ರದೇಶದ ತರಬೇತಿ ಹಾಗೂ ನೇಮಕಾತಿ ವಿಭಾಗದ ಹೆಚ್ಚುವರಿ ನಿರ್ದೇಶಕ ಎಂಬುದು ತಿಳಿದುಬಂದಿದೆ. ಮಂಗಳವಾರ ಬೆಳಗ್ಗೆ ನೀರಜ್ ಕುಮಾರ್ ತಮ್ಮ ಪತ್ನಿ ಸೆಲ್ವಿ ಹಾಗೂ ಪುತ್ರ ಶ್ರೀವತ್ಸ ಅವರೊಂದಿಗೆ ಬೆಂಗಳೂರಿನಿಂದ ಮಡಿಕೇರಿಗೆ ಪ್ರವಾಸ ಹೊರಟಿದ್ದರು. ಇದನ್ನೂ ಓದಿ: Odisha Train Tragedy – ವಿಚಾರಣೆ ಎದುರಿಸಿದ್ದ ಎಂಜಿನಿಯರ್ ನಾಪತ್ತೆ ಅನ್ನೋ ವರದಿ ನಿರಾಕರಿಸಿದ ರೈಲ್ವೆ
ಮದ್ದೂರು ಮಾರ್ಗವಾಗಿ ಮಡಿಕೇರಿಗೆ ತೆರಳುತ್ತಿದ್ದ ವೇಳೆ ನಿಂತಿದ್ದ ನೀರಿನ ಮೇಲೆ ಚಕ್ರ ಹರಿದು ಅಪಘಾತ ಸಂಭವಿಸಿದೆ. ದುರ್ಘಟನೆ ಸಂಭವಿಸುತ್ತಲೇ ನೀರಜ್ ಕುಮಾರ್, ಪತ್ನಿ ಸೆಲ್ವಿ ಹಾಗೂ ಚಾಲಕ ನಿರಂಜನ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪುತ್ರ ಶ್ರೀವತ್ಸಗೆ ಗಂಭೀರ ಗಾಯವಾಗಿದ್ದು, ಅವರನ್ನು ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಮಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಮದ್ದೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಭಾರೀ ಮಳೆ – ರಸ್ತೆಯಲ್ಲಿ ವಾಹನ ಸವಾರರ ಪರದಾಟ