ಉರುಳಿದ ತೂಫಾನ್ ವಾಹನ – 6 ವರ್ಷದ ಕಂದಮ್ಮ ಸಾವು, 17 ಮಂದಿ ಗಂಭೀರ

Public TV
1 Min Read
MDK ACCIDENT

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿ ತೂಫಾನ್ ವಾಹನ ಉರುಳಿದ ಪರಿಣಾಮ ಮಗು ಸಾವನ್ನಪ್ಪಿದ್ದು, ಹಲವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಕೋವರ್ ಕೊಲ್ಲಿ ಬಳಿ ರಾತ್ರಿ ನಡೆದಿದೆ.

ಸೋಮವಾರಪೇಟೆ ತಾಲೂಕಿನ ಮಡಿಕೇರಿ ರಾಜ್ಯ ಹೆದ್ದಾರಿಯ ಕೋವರ್ ಕೊಲ್ಲಿ ಸಮೀಪ ಭಾನುವಾರ ರಾತ್ರಿ ಸುಮಾರು 9:30ಕ್ಕೆ ಈ ಅಪಘಾತ ನಡೆದಿದೆ. ಬೆಳಗಾವಿ ಮೂಲದ ತಂಡ ವಾಹನದಲ್ಲಿ ಧರ್ಮಸ್ಥಳ ತೀರ್ಥಯಾತ್ರೆಗೆ ಹೊರಟಿತ್ತು ಎನ್ನಲಾಗಿದೆ. ಈ ವೇಳೆ ಕೋವರ್ ಕೊಲ್ಲಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ತೂಫಾನ್ ವಾಹನ ಉರುಳಿದ ಪರಿಣಾಮ ವಾಹನದಲ್ಲಿದ್ದ ಆರು ವರ್ಷದ ಹೆಣ್ಣು ಮಗು ಸ್ಥಳದಲ್ಲೇ ಮೃತಪಟ್ಟಿದೆ.

vlcsnap 2019 06 03 07h15m58s927

ಒಂಬತ್ತು ಮಕ್ಕಳು ಸೇರಿದಂತೆ 17 ಮಂದಿಗೆ ಮುಖ ಹಾಗೂ ದೇಹದ ವಿವಿಧ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳಿಗೆ ಸೋಮವಾರಪೇಟೆ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಹೆಚ್ವಿನ ಚಿಕಿತ್ಸೆಗಾಗಿ ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತದಿಂದಾಗಿ ತಲೆ ಭಾಗದಲ್ಲಿ ಗಂಭೀರವಾಗಿ ಗಾಯಗಳಾಗಿರುವ ಇಬ್ಬರು ಮಹಿಳೆಯರ ಸ್ಥಿತಿ ಶೋಚನೀಯವಾಗಿದ್ದು, ಸಾವು-ಬದುಕಿನ ಮಧ್ಯೆ ಹೋರಾಡುತ್ತಿರುವ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಸಂಬಂಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article