ಮಂಡ್ಯ: ಜಿಲ್ಲೆಯಲ್ಲಿ ಬಸ್ ನಾಲೆಗೆ ಉರುಳಿ 30 ಜನರು ಜಲಸಮಾಧಿಯಾದ ದುರಂತ ಘಟನೆಗೆ ಕಾರಣನಾದ ಖಾಸಗಿ ಬಸ್ ಚಾಲಕ ಕೊನೆಗೂ ಸೆರೆ ಸಿಕ್ಕಿದ್ದಾನೆ.
ನವೆಂಬರ್ 24 ರಂದು ಪಾಂಡವಪುರದ ಕನಗನಮರಡಿ ಖಾಸಗಿ ಬಸ್ ವಿ.ಸಿ ನಾಲೆಗೆ ಬಿದ್ದು, 30 ಜನರು ಮೃತಪಟ್ಟಿದ್ದರು. ಬಸ್ ದುರಂತಕ್ಕೆ ಕಾರಣನಾಗಿದ್ದ ಖಾಸಗಿ ಬಸ್ ಚಾಲಕ ಶಿವಣ್ಣನನ್ನು ಪಾಂಡವಪುರ ಪೊಲೀಸರು ಭಾನುವಾರ ರಾತ್ರಿ ಬಂಧಿಸಿದ್ದಾರೆ. ಇಂದು ಆರೋಪಿ ಶಿವಣ್ಣನನ್ನು ಪೊಲೀಸರು ಕೋರ್ಟ್ ಗೆ ಹಾಜರು ಪಡಿಸಲಿದ್ದಾರೆ.
Advertisement
Advertisement
ಈ ಹಿಂದೆ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಬಸ್ ಅಪಘಾತ ಕುರಿತು ತನಿಖೆ ನಡೆಸಿ ಸರ್ಕಾರಕ್ಕೆ ಪ್ರಮುಖ ನಾಲ್ಕು ಅಂಶಗಳ ವರದಿಯನ್ನು ಕೊಟ್ಟಿದ್ದರು. ಮೊದಲನೆಯದು ಬಸ್ ಚಾಲಕ ನಿರ್ಲಕ್ಷ್ಯ ತೋರಿದ್ದು, ಚಾಲನೆ ವೇಳೆ ಮೊಬೈಲ್ ಉಪಯೋಗಿಸಿದ್ದು ಕಾರಣವಾಗಿರಬಹುದು ಎಂದು ತಿಳಿಸಿದ್ದರು. ನಾಲೆ ಪಕ್ಕ ತಡೆಗೋಡೆ ಇಲ್ಲದೇ ಇರುವುದು ಜೊತೆಗೆ ರಸ್ತೆಯಿಂದ ನಾಲೆವರೆಗೆ ಇಳಿಜಾರು ಇರುವುದು ಸಹ ಅಪಘಾತಕ್ಕೆ ಕಾರಣವಾಗಿದೆ. ಇನ್ನೂ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು ಹಾಗೂ ಕಿರಿದಾದ ರಸ್ತೆ ಇದ್ದ ಕಾರಣ 30 ಜನರ ಸಾವಿಗೆ ಕಾರಣವಾಗಿರಬಹುದು ಎಂದು ಅಧಿಕಾರಿಗಳು ವರದಿಯಲ್ಲಿ ತಿಳಿಸಿದ್ದರು.
Advertisement
Advertisement
ಅಪಘಾತ ನಡೆದಿದ್ದು ಹೇಗೆ?
ಪಾಂಡವಪುರದಿಂದ ಮಂಡ್ಯಕ್ಕೆ ತೆರಳುತ್ತಿದ್ದ ಬಸ್ ಚಾಲಕನ ನಿಯಂತ್ರಣ ತಪ್ಪಿ ಕನಗನಮರಡಿ ರಸ್ತೆ ಬದಿಯ ವಿಸಿ ನಾಲೆಗೆ ಉರುಳಿತ್ತು. ಖಾಸಗಿ ಬಸ್ ಪ್ರತಿನಿತ್ಯ ಎರಡು ಬಾರಿ ಸಂಚರಿಸುತ್ತಿತ್ತು. ಬಸ್ ಸಂಪೂರ್ಣ ನೀರಿನಲ್ಲಿ ಮುಳುಗಿದ್ದು, 30ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು ವಿಷಯ ತಿಳಿಯುತ್ತಿದ್ದಂತೆ ನಾಲೆಗೆ ಹರಿಸುವ ನೀರನ್ನು ನಿಲ್ಲಿಸಲಾಗಿತ್ತು. ಬಸ್ ಉಲ್ಟಾ ಅಂದರೆ ಬಾಗಿಲು ಕೆಳಗಡೆ ಆಗಿ ಬಿದ್ದಿದ್ದರಿಂದ ಪ್ರಯಾಣಿಕರು ಹೊರ ಬರಲಾರದೇ ಉಸಿರುಗಟ್ಟಿ ಸಾವನ್ನಪ್ಪಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv