ಸಿಲಿಕಾನ್ ಸಿಟಿಯಲ್ಲಿ ಭಾನುವಾರವೇ ಅಪಘಾತಗಳು ಹೆಚ್ಚು!

Public TV
2 Min Read
Bengaluru Traffic 1

– ಸಂಡೇ ಯಾಕೆ ಅಪಘಾತ ಅಧಿಕ
– ಬೈಕ್ ಸವಾರರೇ ಹೆಚ್ಚು ಸಾವು

ಬೆಂಗಳೂರು: ಅಚ್ಚರಿ ಮತ್ತು ಆತಂಕಕ್ಕೆ ಕಾರಣವಾದ ಬಗ್ಗೆ ಪೊಲೀಸರು ಮಾಹಿತಿಯೊಂದನ್ನು ಹೊರಗೆ ಹಾಕಿದ್ದಾರೆ. ಬೆಂಗಳೂರಿನ ಅಪಘಾತಗಳ ಬಗ್ಗೆ ವಿಚಿತ್ರ ಸತ್ಯವನ್ನು ಸಂಚಾರಿ ಪೊಲೀಸರು ಬಹಿರಂಗ ಪಡಿಸಿದ್ದಾರೆ.

2019 ರಲ್ಲಿ ನಡೆದ ಅಪಘಾತಗಳಲ್ಲಿ ಭಾನುವಾರವೇ ಹೆಚ್ಚು ಜನ ಮೃತಪಟ್ಟಿರುವುದು ಆಘಾತಕಾರಿ ಸಂಗತಿಯಾಗಿದೆ. ಅಪಘಾತದಲ್ಲಿ ಮೃತಪಟ್ಟ ಒಟ್ಟು 744 ಜನರಲ್ಲಿ ಭಾನುವಾರ 140 ಜನರು ಮೃತಪಟ್ಟಿದ್ದಾರೆ. ಮಂಗಳವಾರ 126 ಜನ, ಬುಧವಾರ 105 ಮಂದಿ, ಶುಕ್ರವಾರ 97 ಜನರು, ಗುರುವಾರ 95 ಮಂದಿ, ಶನಿವಾರ 94 ಹಾಗೂ ಸೋಮವಾರ 87 ಜನರು ಮೃತಪಟ್ಟಿದ್ದಾರೆ. ಭಾನುವಾರ ವಾಹನ ದಟ್ಟಣೆ ಬೆಂಗಳೂರಿನಲ್ಲಿ ಕಡಿಮೆ ಇರುವುದರಿಂದ ಕೆಲವರು ಅತಿ ವೇಗದಿಂದ ವಾಹನ ಚಲಾಯಿಸಲು ಹೋಗಿ ಸಾವು ತಂದುಕೊಂಡಿದ್ದಾರೆ ಎಂಬ ಅಂಶ ವರದಿಯಲ್ಲಿದೆ.

Bengaluru City 1

ಸಂಜೆ 6 ರಿಂದ 9 ಗಂಟೆ ಅಧಿಕ ಅಪಘಾತದ ಸಮಯವಾಗಿದ್ದು, ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಮಾರಣಾಂತಿಕ ಅಪಘಾತಗಳು ಸಂಜೆ 6 ರಿಂದ 9ರ ವೇಳೆಯಲ್ಲಿ ಅಧಿಕವಾಗಿದ್ದವು. ಈ ವೇಳೆ 133 ಮಾರಣಾಂತಿಕ ಅಪಘಾತಗಳು ಸಂಭವಿಸಿದ್ದು, ನಂತರದ ಸ್ಥಾನದಲ್ಲಿ ಮಧ್ಯರಾತ್ರಿ 12 ರಿಂದ ಬೆಳಗ್ಗೆ 6 ಗಂಟೆ ವೇಳೆಗೆ 128 ಸಾವು ಸಂಭವಿಸಿವೆ. ಸಂಜೆ ವೇಳೆ ವಾಹನ ಸವಾರರ ಮಾನಸಿಕ ಒತ್ತಡ ಹೆಚ್ಚಿರುವುದರಿಂದ ಅಜಾಗರೂಕರಾಗಿ ವಾಹನ ಚಲಾಯಿಸಿ ಮರಣ ಹೊಂದುತ್ತಿದ್ದಾರೆ.

ಉದ್ಯಾನನಗರಿಯಲ್ಲಿ ಪ್ರತಿದಿನ ಇಬ್ಬರು ರಸ್ತೆ ಅಪಘಾತದಲ್ಲಿ ಮೃತಪಟ್ಟರೆ, ಸುಮಾರು 30ಕ್ಕೂ ಹೆಚ್ಚು ವಾಹನ ಸವಾರರು ಗಾಯಗೊಳ್ಳುತ್ತಿದ್ದಾರೆ ಎಂಬ ಆಘಾತಕಾರಿ ವಿಷಯವನ್ನು ಸಂಚಾರಿ ಪೊಲೀಸರು ವರದಿಯೊಂದನ್ನು ಬಿಡುಗಡೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ಮೂರು ವರ್ಷಗಳಲ್ಲಿ ನಡೆದ ರಸ್ತೆ ಅಪಘಾತಗಳ ಪಟ್ಟಿ ಬಿಡುಗಡೆ ಮಾಡಿದ್ದು, 2019ರ ಅಂಕಿ ಅಂಶಗಳ ಪ್ರಕಾರ, ನಗರದಲ್ಲಿ 2018ಕ್ಕಿಂತಲೂ ಹೆಚ್ಚು ರಸ್ತೆ ಅಪಘಾತಗಳು 2019ರಲ್ಲಿ ನಡೆದಿವೆ. ಅಂದರೆ 2019ರಲ್ಲಿ 4,688 ಅಪಘಾತಗಳು ನಡೆದರೆ, 2018ರಲ್ಲಿ 4,611 ಅಪಘಾತಗಳು ಸಂಭವಿಸಿದ್ದವು. ಆದರೆ, 2017ರಲ್ಲಿ 5,065 ಅಪಘಾತಗಳು ನಡೆದಿದ್ದವು. ಕಳೆದ ಎರಡು ವರ್ಷದ ಅಂಕಿ ಅಂಶಗಳಲ್ಲಿ ಗಮನಿಸಿದರೆ ಅಪಘಾತಗಳ ಸಂಖ್ಯೆ ಏರುಗತಿಯಲ್ಲಿ ಸಾಗುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.

Police Jeep 1 1

ಬೈಕ್ ಸವಾರರೇ ಹೆಚ್ಚು ಸಾವು:
2019ರಲ್ಲಿ ನಡೆದ 4,688 ರಸ್ತೆ ಅಪಘಾತ ಪ್ರಕರಣಗಳಲ್ಲಿ ಒಟ್ಟು 744 ಜನ ದ್ವಿಚಕ್ರ ವಾಹನ ಚಾಲನೆ ವೇಳೆ ಮೃತಪಟ್ಟಿದ್ದಾರೆ ಎಂದು ವರದಿ ಹೇಳಿದೆ. ಇದು 2018ರಲ್ಲಿ ಮೃತಪಟ್ಟವರಿಗಿಂತಲೂ ಹೆಚ್ಚಿದೆ. ಅಂದರೆ, 2018 ರಲ್ಲಿ 663 ಮಂದಿ ಮೃತಪಟ್ಟಿದ್ದರು. 2017 ರಲ್ಲಿ 609 ಜನ ಮೃತಪಟ್ಟಿದ್ದರು. ಕಳೆದ ಮೂರು ವರ್ಷದಿಂದ ಬೆಂಗಳೂರಿನಲ್ಲಿ ರಸ್ತೆ ಅಪಘಾತ ಪ್ರಕರಣಗಳಲ್ಲಿ ಮೃತಪಡುತ್ತಿರುವವರ ಸಂಖ್ಯೆ ಮಾತ್ರ ಹೆಚ್ಚಾಗುತ್ತಲೇ ಇದೆ. ಇದರಲ್ಲಿ ದ್ವಿಚಕ್ರ ವಾಹನ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆಯೇ ಹೆಚ್ಚಿದೆ. ಕಳೆದ ವರ್ಷ ಬೆಂಗಳೂರಿನಲ್ಲಿ 356 ಜನ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರೆ, 246 ಜನ ಪಾದಚಾರಿಗಳು ಮೃತಪಟ್ಟಿದ್ದರು.

Share This Article
Leave a Comment

Leave a Reply

Your email address will not be published. Required fields are marked *