ಹಾಸನ: ಲಾರಿ ಮತ್ತು ಮಿನಿ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಸುಮಾರು 30 ಕರುಗಳನ್ನು ರಕ್ಷಿಸಿರುವ ಘಟನೆ ಜಿಲ್ಲೆಯ ಚನ್ನರಾಯಪಟ್ಟಣದ ಹಿರಿಸಾವೆ ಬಳಿ ನಡೆದಿದೆ.
ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಡರಾತ್ರಿ ಈ ಅಪಘಾತ ಸಂಭವಿಸಿದೆ. ಮಿನಿ ಲಾರಿಯಲ್ಲಿ ಸುಮಾರು 30 ಕರುಗಳನ್ನು ಬೆಂಗಳೂರಿನ ಕಡೆಗೆ ಸಾಗಿಸಲಾಗುತ್ತಿತ್ತು. ಆದರೆ ಇದರ ಹಿಂದೆ ಇನ್ನೊಂದು ಲಾರಿ ಬಂದಿದ್ದು, ಚಾಲಕ ಮಿನಿ ಲಾರಿಯನ್ನು ಓವರ್ ಟೇಕ್ ಮಾಡಿ ಮುಂದೆ ಹೋಗಲು ಪ್ರಯತ್ನಿಸಿದ್ದಾನೆ. ಈ ಸಂದರ್ಭದಲ್ಲಿ ಹಿರಿಸಾವೆ ಪೊಲೀಸ್ ಠಾಣಾ ವ್ಯಾಪ್ತಿಯ ಬಳಿ ಎರಡು ವಾಹನಗಳ ಮಧ್ಯೆ ಅಪಘಾತ ಸಂಭವಿಸಿದೆ.
ಅಪಘಾತ ಸಂಭವಿಸಿದ ಸ್ಥಳ್ಕಕೆ ಬೀಟ್ ಪೊಲೀಸರು ಬಂದಿದ್ದು, ಈ ವೇಳೆ ಕರುಗಳನ್ನು ಬಿಟ್ಟು ಎರಡು ವಾಹನಗಳ ಚಾಲಕರು ಪರಾರಿಯಾಗಿದ್ದಾರೆ. ಸದ್ಯಕ್ಕೆ ಲಾರಿಯಲ್ಲಿದ್ದ ಕರುಗಳನ್ನು ಹಿರಿಸಾವೆ ಪೊಲೀಸ್ ಠಾಣೆಯ ಬಳಿ ಕರೆದುಕೊಂಡು ಬಂದು ಆರೈಕೆ ಮಾಡಲಾಗುತ್ತಿದೆ.
ಗೃಹರಕ್ಷಕ ದಳದ ಸಿಬ್ಬಂದಿ ಇಂದು ಬೆಳಗ್ಗೆ ಕರುಗಳಿಗೆ ಸುಮಾರು 50 ಲೀಟರ್ ಹಾಲನ್ನು ತಂದು ಕುಡಿಸಿವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಈ ಅಪಘಾತಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.