Chikkamagaluru

ಚಿಕ್ಕಮಗಳೂರು: ಬೈಕ್-ಟಿಪ್ಪರ್ ಮುಖಾಮುಖಿ ಡಿಕ್ಕಿ, ಇಬ್ಬರ ಸಾವು

Published

on

Share this

-5 ಕಿ.ಮೀ. ದೂರದ ಹಳ್ಳಿಗೆ ಒಂದೂವರೆ ಗಂಟೆ ತಡವಾಗಿ ಬಂದ ಅಂಬುಲೆನ್ಸ್

ಚಿಕ್ಕಮಗಳೂರು: ಬೈಕ್ ಹಾಗೂ ಟಿಪ್ಪರ್ ಮುಖಾಮುಖಿ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯೆ ಮುಗುಳುವಳ್ಳಿ ಎಂಬಲ್ಲಿ ಇಂದು ಬೆಳಗ್ಗೆ ನಡೆದಿದೆ.

ಚಿಕ್ಕಮಗಳೂರಿನ ರಾಮನಹಳ್ಳಿ ನಿವಾಸಿಗಳಾದ ಚನ್ನಕೇಶವ (30), ಕಾರ್ತಿಕ್ (28) ಮೃತ ದುರ್ದೈವಿಗಳು. ಕಾರ್ತಿಕ್ ತನ್ನ ತಂದೆ ತಾಯಿಯ ಮದುವೆ ವಾರ್ಷಿಕೋತ್ಸವವನ್ನು ಮುಗಿಸಿಕೊಂಡು ಚಿಕ್ಕಮಗಳೂರಿನಿಂದ ಬೆಂಗಳೂರಿಗೆ ಹೋಗುವಾಗ ಈ ಅವಘಡ ನಡೆದಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಮೂರ್ನಾಲ್ಕು ಕ್ರಷರ್‍ಗಳಿದ್ದು ಟಿಪ್ಪರ್ ಚಾಲಕರು ಅತ್ಯಂತ ವೇಗವಾಗಿ ವಾಹನ ಚಲಾಯಿಸುವುದರಿಂದ ಅಪಘಾತ ಸಂಭವಿಸಿದೆ ಎಂದು ಸ್ಥಳೀಯರು ಟಿಪ್ಪರ್ ಚಾಲಕರು ಹಾಗೂ ಕ್ರಷರ್ ಮಾಲೀಕರ ವಿರುದ್ಧ ಹಿಡಿಶಾಪ ಹಾಕ್ತಿದ್ದಾರೆ.

ಅಪಘಾತದ ಕೂಡಲೇ ಸ್ಥಳೀಯರು ಸುಮಾರು 11 ಗಂಟೆ ವೇಳೆಗೆ 108 ಕ್ಕೆ ಕರೆ ಮಾಡಿದ್ದಾರೆ. ಆದರೆ ಅಂಬುಲೆನ್ಸ್ ಬಂದಿದ್ದು ಮಾತ್ರ 12.30 ಕ್ಕೆ. ಅಪಘಾತ ಸಂಭವಿಸಿದ ಕೂಡಲೇ ಅಂಬುಲೆನ್ಸ್‍ಗೆ ಕರೆ ಮಾಡಿದ್ರೂ ಐದು ಕಿ.ಮೀ. ದೂರದ ಮುಗುಳುವಳ್ಳಿಗೆ ಬರೋದಕ್ಕೆ ಅವರು ತೆಗೆದುಕೊಂಡ ಸಮಯ ಒಂದೂವರೆ ಗಂಟೆ. ಇದ್ರಿಂದ ಸಿಟ್ಟಿಗೆದ್ದ ಸ್ಥಳಿಯರು ಕೆಲಕಾಲ ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು.

ಟಿಪ್ಪರ್ ಚಾಲಕರಿಗೆ ಸರಿಯಾಗಿ ಮೀಸೆಯೂ ಬಂದಿಲ್ಲ. ಅಂತಹವರೆಲ್ಲಾ ಟಿಪ್ಪರ್ ಚಾಲಾಯಿಸ್ತಾರೆ. ಕ್ರಷರ್ ಮಾಲೀಕರು ಹಾಗೂ ಪೊಲೀಸ್ ಇಲಾಖೆ ಅಂತವರ ಬಗ್ಗೆ ಎಚ್ಚರ ವಹಿಸಬೇಕು. ಇಲ್ಲವಾದ್ರೆ ಮುಂದಿನ ದಿನಗಳಲ್ಲಿ ಈ ರಸ್ತೆಯಲ್ಲಿ ಜೀವಕ್ಕೆ ಬೆಲೆಯೇ ಇರೋದಿಲ್ಲ. ಇನ್ನೊಮ್ಮೆ ಇಂತಹ ಘಟನೆ ನಡೆದ್ರೆ ಬೃಹತ್ ಹೋರಾಟ ನಡೆಸುತ್ತೇವೆ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.

ಸ್ಥಳಕ್ಕೆ ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿಕೊಂಡು ಲಾರಿ ಚಾಲಕ ಹಾಗೂ ಲಾರಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 

Click to comment

Leave a Reply

Your email address will not be published. Required fields are marked *

Advertisement
Advertisement