ಕಲಬುರಗಿ: ಟ್ಯಾಂಕರ್ ಮತ್ತು ಬೈಕ್ ನಡುವೆ ಡಿಕ್ಕಿಯಾದ ಪರಿಣಾಮ ಬೈಕ್ ನಲ್ಲಿದ್ದ ಪತಿ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ನಗರದ ಹೊಸ ಆರ್ ಟಿ ಓ ಕಚೇರಿ ಬಳಿ ನಡೆದಿದೆ.
ಜಿಲ್ಲೆಯ ರೆಹಮತ್ ನಗರ ನಿವಾಸಿಗಳಾಗಿದ್ದ ಗೌಸ್(28) ಮತ್ತು ಅವರ ಪತ್ನಿ ನಪೀಸ್ ಗೌಸ್(24) ಮೃತ ದುರ್ದೈವಿಗಳು. ಈ ಅಪಘಾತದಲ್ಲಿ ಅದೃಷ್ಟವಶಾತ್ ದಂಪತಿಯ ಇಬ್ಬರು ಮಕ್ಕಳು ಪಾರಾಗಿದ್ದು, ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ದಂಪತಿ ಹಾಗೂ ಮಕ್ಕಳು ಒಂದೇ ಬೈಕಿನಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಟ್ಯಾಂಕರ್ ಚಾಲಕ ಅತೀವೇಗವಾಗಿ ಗಾಡಿಯನ್ನು ಚಲಾಯಿಸಿಕೊಂಡು ಬಂದಿದ್ದು, ನಗರದ ರಿಂಗ್ ರೋಡಿನಲ್ಲಿ ಏಕಾಏಕಿ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ದಂಪತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಮಕ್ಕಳಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಅಪಘಾತದ ನಂತರ ಟ್ಯಾಂಕರ್ ಸಮೇತ ಚಾಲಕ ಪರಾರಿಯಾಗಿದ್ದಾನೆ.
ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.