ಗದಗ: ಸರ್ಕಾರಿ ಬಸ್ ಹಾಯ್ದು ಬೈಕ್‌ನ ಹಿಂಬದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರವಲಯದ ಹೊಂಬಳ ರಸ್ತೆಯಲ್ಲಿ ನಡೆದಿದೆ. ಬಸ್ ಪಲ್ಟಿಯಾಗಿ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿದ್ದು, ಚಿಕಿತ್ಸೆಗೆ ಗದಗ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಮೃತ ಬೈಕ್ ಸವಾರ ಗದಗ ತಾಲೂಕಿನ ಲಿಂಗದಾಳ ಗ್ರಾಮದ ನಿವಾಸಿ ಹನುಮಂತಪ್ಪ ಛಲವಾದಿ(48) ಎಂದು ಗುರುತಿಸಲಾಗಿದೆ. ಹನುಮಂತಪ್ಪ ತನ್ನ ಅಳಿಯ ರೋಹಿತ್ ಜೊತೆಗೆ ಲಿಂಗದಾಳ ಗ್ರಾಮದಿಂದ ಬೈಕ್ ಹಿಂಬದಿ ಕುಳಿತು ಗದಗಕ್ಕೆ ಹೊರಟಿದ್ದರು. ಈ ವೇಳೆ ನಗರದ ಹೊರವಲಯದಲ್ಲಿ ಟ್ರ್ಯಾಕ್ಟರ್ ಅನ್ನು ಓವರ್ ಟೇಕ್ ಮಾಡಲು ಹೋಗಿ ಗದಗದಿಂದ ಬರುತ್ತಿದ್ದ ಬಸ್‌ಗೆ ಡಿಕ್ಕಿಯಾಗಿ ದುರ್ಘಟನೆ ನಡೆದಿದೆ. ಇದನ್ನೂ ಓದಿ: ಕುಡಿದ ಮತ್ತಲ್ಲಿ ತಾಯಿಯನ್ನೇ ಥಳಿಸಿ ಕೊಂದ ಪಾಪಿ ಪುತ್ರ
ಬೈಕ್ ಸವಾರ ರೋಹಿತ್‌ಗೆ ಸಣ್ಣಪುಟ್ಟ ಗಾಯಳಾಗಿದ್ದು, ಹಿಂಬದಿ ಕುಳಿತ ಹನುಮಂತಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬಸ್ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ಬಸ್‌ನಲ್ಲಿದ್ದ 10ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ. ಘಟನೆ ನಡೆದು ಒಂದೂವರೆ ಗಂಟೆಯಾದರೂ ಬಾರದ ಅಂಬುಲೆನ್ಸ್ ಸೇವೆಯ ವಿರುದ್ಧ ಸ್ಥಳದಲ್ಲಿದ್ದ ಜನರು ಆಕ್ರೋಶ ಹೊರಹಾಕಿದರು. ಇದನ್ನೂ ಓದಿ: 20ಕ್ಕೂ ಹೆಚ್ಚು ಎಮ್ಮೆ, ಹಸುಗಳ ಮೇಲೆ ಆ್ಯಸಿಡ್ ಎರಚಿದ ಕಿಡಿಗೇಡಿಗಳು!
ಗಾಯಾಳುಗಳನ್ನು ಪೊಲೀಸ್ ವಾಹನ, ಇತರೆ ಗೂಡ್ಸ್ ವಾಹನ ಹಾಗೂ ಬೈಕ್‌ಗಳಲ್ಲಿ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಗ್ರಾಮೀಣ ಸಿಪಿಐ ಹಾಗೂ ಸಿಬ್ಬಂದಿ ಆಗಮಿಸಿ ಪರಿಶೀಲನೆ ಮಾಡಿದರು. ಘಟನೆ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.