DistrictsKarnatakaLatestLeading NewsMain PostTumakuru

ತುಮಕೂರಿನ ಶಿರಾದಲ್ಲಿ ಭೀಕರ ಅಪಘಾತ – ಕ್ರೂಸರ್‌ ಚಕ್ರಕ್ಕೆ 9 ಮಂದಿ ಬಲಿ?

ತುಮಕೂರು: ಶಿರಾ ತಾಲೂಕಿನ ಕಳ್ಳಂಬೆಳ್ಳದ ಬಾಲೇನಹಳ್ಳಿಯಲ್ಲಿ 9 ಮಂದಿಯ ಬಲಿ ತೆಗೆದುಕೊಂಡ ಅಪಘಾತಕ್ಕೆ ಕ್ರೂಸರ್‌ ಚಕ್ರ ಕಾರಣವಾಯಿತೇ ಎಂಬ ಅನುಮಾನ ಎದ್ದಿದೆ.

ಹೌದು. ಇಂದು ಮುಂಜಾನೆ ನಡೆದ ಅಪಘಾತದಲ್ಲಿ‌ ಮೂವರು ಮಕ್ಕಳು, ಚಾಲಕ ಸೇರಿ ಕ್ರೂಸರ್‌ನಲ್ಲಿದ್ದ 9 ಮಂದಿ ಸಾವನ್ನಪ್ಪಿದ್ದು, 15 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಈ ದುರಂತಕ್ಕೆ ಚಕ್ರ ಕಾರಣವಾಗಿರಬಹುದು ಎಂಬ ಅನುಮಾನ ಮೂಡಿದೆ.

ಅಪಘಾತ ಹೇಗಾಯ್ತು?
ರಾಯಚೂರಿನಿಂದ 23 ಕಾರ್ಮಿಕರನ್ನು ಹೊತ್ತುಕೊಂಡು ಬೆಂಗಳೂರಿಗೆ ಕ್ರೂಸರ್‌ ಬರುತ್ತಿತ್ತು. ಮುಂಜಾನೆ 3:30ರ ವೇಳೆಗೆ ವೇಗವಾಗಿ ಬರುತ್ತಿದ್ದ ಕ್ರೂಸರ್‌ ಮೊದಲು ಹೈವೇಯ ಡಿವೈಡರ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಅರ್ಧ ಭಾಗ ರಸ್ತೆಯಲ್ಲಿತ್ತು. ಈ ವೇಳೆ ಹಿಂದಿನಿಂದ ವೇಗವಾಗಿ ಬರುತ್ತಿದ್ದ ಟ್ರಕ್‌ ಡಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಕಾರಿನಲ್ಲಿದ್ದ 9 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಟಯರ್‌ ಕಾರಣವೇ?
ಕ್ರೂಸರ್‌ ಎಂಯುವಿ(ಮಲ್ಟಿ ಯುಟಿಲಿಟಿ ವೆಹಿಕಲ್‌) ಆಗಿದ್ದು ಇದರ ಹಿಂಭಾಗದ ಚಕ್ರ ಸವೆದು ಹೋಗಿದೆ. ಮುಂಭಾಗದ ಬಲಗಡೆಯ ಚಕ್ರ ಸ್ಫೋಟಗೊಂಡಿದ್ದು, ಕೇವಲ ರಿಮ್‌ ಮಾತ್ರ ಇದೆ. ಈ ಕಾರಣದಿಂದ ಆರಂಭದಲ್ಲಿ ಮುಂಭಾಗದ ಚಕ್ರ ಸ್ಫೋಟಗೊಂಡು ಡಿವೈಡರ್‌ಗೆ ಗುದ್ದಿದೆ. ಈ ವೇಳೆ ಹಿಂದಿನ ವೇಗವಾಗಿ ಬರುತ್ತಿದ್ದ ಲಾರಿ ಕ್ರೂಸರ್‌ಗೆ ಗುದ್ದಿದೆ. ಡಿವೈಡರ್‌ಗೆ ಗುದ್ದಿದರಿಂದ ಕ್ರೂಸರ್‌ ಮುಂದುಗಡೆ ಕುಳಿತವರು, ಲಾರಿ ಗುದ್ದಿದರಿಂದ ಹಿಂದುಗಡೆ ಕುಳಿತವರು ಸಾವನ್ನಪ್ಪಿದ್ದಾರೆ. ಕ್ರೂಸರ್‌ ಮಧ್ಯ ಭಾಗದಲ್ಲಿ ಕುಳಿತವರಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹೈವೇಯಲ್ಲಿ ಸಂಭವಿಸುವ ರಸ್ತೆ ಅಪಘಾತಗಳಲ್ಲಿ ಬಹುತೇಕ ಅಪಘಾತಗಳು ಟಯರ್‌ ಸ್ಫೋಟಗೊಂಡು ಸಂಭವಿಸುತ್ತಿರುತ್ತದೆ. ಟಯರ್‌ ಸವೆದು ಹೋಗಿದ್ದರೆ ಅದನ್ನು ಬದಲಿಸಬೇಕಾಗುತ್ತದೆ. ಆದರೆ ಸವೆದು ಹೋಗಿದ್ದರೂ ವೇಗವಾಗಿ ವಾಹನ ಓಡಿಸಿದರೆ ಬಿಸಿಯಿಂದಾಗಿ ಚಕ್ರ ಸ್ಫೋಟಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

ಮದ್ಯ ಸೇವನೆ ಮಾಡಿದ್ನಾ ಚಾಲಕ?
ರಾಯಚೂರಿನಿಂದ ಹೊರಟ್ಟಿದ್ದ ಕ್ರೂಸರ್‌ ಅನ್ನು ಮದ್ಯ ರಾತ್ರಿ ಚಾಲಕ ಚಹಾ ಕುಡಿಯಲು ನಿಲ್ಲಿಸಿದ್ದ. ಈ ಸಂದರ್ಭದಲ್ಲಿ ಕಾರ್ಮಿಕರು ಚಹಾ ಕುಡಿಯಲು ಅಂಗಡಿಗೆ ತೆರಳಿದ್ದರೆ ಚಾಲಕ ಕೃಷ್ಣಪ್ಪ ಬೇರೆ ಕಡೆ ಹೋಗಿದ್ದ. ಈ ಸಂದರ್ಭದಲ್ಲಿ ಆತ ಮದ್ಯ ಸೇವನೆ ಮಾಡಿರಬಹುದು. ನಿಲ್ಲಿಸಿದ ಬಳಿಕ ಕ್ರೂಸರ್‌ ಅನ್ನು ಬಹಳ ವೇಗವಾಗಿ ಓಡಿಸುತ್ತಿದ್ದ ಎಂದು ಗಾಯಾಳುಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಕೆಲಸ:
ಮೃತಪಟ್ಟವರೆಲ್ಲರೂ ರಾಯಚೂರು ಜಿಲ್ಲೆಯ ಸಿರವಾರ, ಮಾನ್ವಿ ಹಾಗೂ ದೇವದುರ್ಗ ತಾಲೂಕಿನವರಾಗಿದ್ದಾರೆ. ಬೆಂಗಳೂರಿನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಇವರು ಊರಿಗೆ ತೆರಳಿದ್ದರು. ಊರಿನಿಂದ ಬೆಂಗಳೂರಿಗೆ ಬರಲು ವಡವಟ್ಟಿ ಗ್ರಾಮ ಕೃಷ್ಣಪ್ಪ ಅವರ ಕ್ರೂಸರ್‌ ಅನ್ನು ಬುಕ್‌ ಮಾಡಿದ್ದರು. ನಿನ್ನೆ ಮಧ್ಯಾಹ್ನ ಇವರೆಲ್ಲ ಕಾರ್ಮಿಕರು ಊರು ಬಿಟ್ಟು ಬೆಂಗಳೂರು ಕಡೆ ಹೊರಟ್ಟಿದ್ದರು.

Live Tv

Leave a Reply

Your email address will not be published.

Back to top button