ಹಲವು ತಿಂಗಳುಗಳ ನಂತರ ರಾಧಿಕಾ ಕುಮಾರಸ್ವಾಮಿ (Radhika Kumaraswamy) ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ. ತೀರಾ ಅಪರೂಪಕ್ಕೆ ಎನ್ನುವಂತೆ ಸಿನಿಮಾಗಳನ್ನು ಮಾಡುವ ರಾಧಿಕಾ, ಈ ಬಾರಿ ಪ್ಯಾನ್ ಇಂಡಿಯಾ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಸಿನಿಮಾಗೆ ಸಹಿ ಮಾಡಲು ಕಾರಣ ತಮ್ಮ ಸಹೋದರ ಎಂದು ಹೇಳಿದ್ದಾರೆ. ಈ ಸಿನಿಮಾಗೆ ಸಹೋದರ ಹಣ ಹೂಡುತ್ತಿರುವುದರಿಂದ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿರುವುದಾಗಿ ಅವರು ತಿಳಿಸಿದ್ದಾರೆ.
ರಾಧಿಕಾ ಕುಮಾರಸ್ವಾಮಿ ಅವರು ನಾಯಕಿಯಾಗಿ ನಟಿಸುತ್ತಿರುವ ‘ಅಜಾಗ್ರತ’ (Ajagrata) ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಹೈದರಾಬಾದ್ (Hyderabad) ನ ರಾಮನಾಯ್ಡು ಸ್ಟುಡಿಯೋದಲ್ಲಿ ನೆರವೇರಿದೆ. ತೆಲುಗು ಚಿತ್ರರಂಗದ ಖ್ಯಾತ ನಿರ್ಮಾಪಕ ಎ.ಎಂ.ರತ್ನಂ ಚಿತ್ರದ ಪ್ರಥಮ ಸನ್ನಿವೇಶಕ್ಕೆ ಆರಂಭ ಫಲಕ ತೋರಿದರೆ, ಹೆಸರಾಂತ ವಿತರಕ ಟ್ಯಾಗೋರ್ ಮಧು ಕ್ಯಾಮೆರಾ ಚಾಲನೆ ಮಾಡಿದ್ದರು. ಚಿತ್ರರಂಗದ ವಿವಿಧ ಗಣ್ಯರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ.
ಬಾಲಿವುಡ್ ನ ಖ್ಯಾತ ನಟ ಶ್ರೇಯಸ್ ತಲ್ಪಾಡೆ (Shreyas Talpade) ಈ ಚಿತ್ರದ ನಾಯಕನಾಗಿ ನಟಿಸುತ್ತಿದ್ದಾರೆ. ರಾಧಿಕಾ ಕುಮಾರಸ್ವಾಮಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ರಾವ್ ರಮೇಶ್, ಸುನೀಲ್, ಆದಿತ್ಯ ಮೆನನ್, ರಾಘವೇಂದ್ರ ಶ್ರವಣ್, ದೇವರಾಜ್, ಜಯಪ್ರಕಾಶ್, ವಿನಯಾಪ್ರಸಾದ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಇದನ್ನೂ ಓದಿ:ಅಜಯ್ ರಾವ್ ಚಿತ್ರಕ್ಕೆ ಕೆಜಿಎಫ್ ನಟಿ ಅರ್ಚನಾ ಜೋಯಿಸ್ ನಾಯಕಿ
ತೆಲುಗು, ಕನ್ನಡ ಸೇರಿದಂತೆ ಏಳು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದೆ. ರವಿರಾಜ್ ನಿರ್ಮಿಸುತ್ತಿದ್ದಾರೆ. ಎಂ.ಶಶಿಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸಂದೀಪ್ ವಲ್ಲೂರಿ ಛಾಯಾಗ್ರಹಣ, ಶ್ರೀಹರಿ ಸಂಗೀತ ನಿರ್ದೇಶನ ಹಾಗೂ ರವಿವರ್ಮ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
ಏಳು ಭಾಷೆಗಳಲ್ಲಿ ಈ ಚಿತ್ರ ಬರಲಿದೆ. ಡಬ್ ಮಾಡದೆ, ಆಯಾ ಭಾಷೆಗಳಲ್ಲಿ ಪ್ರತ್ಯೇಕವಾಗಿ ಚಿತ್ರೀಕರಣ ನಡೆಯಲಿರುವುದು ಈ ಚಿತ್ರದ ವಿಶೇಷ . ಹಲವು ದಿನಗಳ ನಂತರ ಮತ್ತೆ ರಾಧಿಕಾ ಕುಮಾರಸ್ವಾಮಿ ಸಿನಿಮಾ ರಂಗಕ್ಕೆ ಬಂದಿರುವುದು ಅವರ ಅಭಿಮಾನಿಗಳಿಗೆ ಸಹಜವಾಗಿಯೇ ಸಂಭ್ರಮ ತಂದಿದೆ.