ಬೆಂಗಳೂರು: ರಾಜ್ಯ ವಿಧಾನಸಭೆ ಪ್ರತಿನಿಧಿಗಳಿಂದ ವಿಧಾನಪರಿಷತ್‌ನ ಖಾಲಿ ಇರುವ 3 ಸ್ಥಾನಗಳಿಗೆ ನಿಗದಿಯಾಗಿರುವ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕಾಂಗ್ರೆಸ್ ಪಕ್ಷದ 3 ಅಭ್ಯರ್ಥಿಗಳ ನಾಮಪತ್ರಗಳು ಅಂಗೀಕಾರಗೊಂಡಿವೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಕಾಂಗ್ರೆಸ್ ಪಕ್ಷದಿಂದ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಎನ್.ಎಸ್ ಬೋಸರಾಜು ಮತ್ತು ತಿಪ್ಪಣ್ಣಪ್ಪ ಕಮಕನೂರು ಅವರು ನಾಮಪತ್ರ ಸಲ್ಲಿಸಿದ್ದರು. ಇದನ್ನೂ ಓದಿ: ಜು.3ರಿಂದ 10 ದಿನಗಳ ಕಾಲ ಅಧಿವೇಶನ – ಜೂನ್ 26ರಿಂದ ಮೂರು ದಿನಗಳ ಕಾಲ ನೂತನ ಶಾಸಕರಿಗೆ ತರಬೇತಿ
ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಡಾ.ಕೆ ಪದ್ಮರಾಜನ್ ಅವರ ನಾಮಪತ್ರ ಸೂಚಕರಿಲ್ಲದ ಕಾರಣ ತಿರಸ್ಕೃತಗೊಂಡಿದೆ ಎಂದು ವಿಧಾನಸಭಾ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ.ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಧಾನಪರಿಷತ್ತಿನ ಮೂರು ಸ್ಥಾನಗಳ ಉಪಚುನಾವಣೆಗೆ ಬಿಜೆಪಿ ಮತ್ತು ಜೆಡಿಎಸ್ ಅಭ್ಯರ್ಥಿಗಳನ್ನು ಕಣಕ್ಕಿಳಿಸದೇ ಇರುವ ಕಾರಣ ಮೂವರೂ ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ. ಇದನ್ನೂ ಓದಿ: ಬ್ರ‍್ಯಾಂಡ್ ಬೆಂಗಳೂರು ಕಟ್ಟಲು ನೀವೂ ಕೊಡಿ ಸಲಹೆ: ಸಾರ್ವಜನಿಕರಲ್ಲಿ ಡಿಕೆಶಿ ಮನವಿ
ಕಳೆದ ವಿಧಾನಸಭಾ ಚುನಾವಣೆಯ ವೇಳೆ ಬಿಜೆಪಿಯಲ್ಲಿ ಟಿಕೆಟ್ ಸಿಗದೇ ಕಾಂಗ್ರೆಸ್ ಸೇರಿದ್ದ ಜಗದೀಶ್ ಶೆಟ್ಟರ್, ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಪರಾಭವಗೊಂಡಿದ್ದರು. ಅವರನ್ನು ಪಕ್ಷದಿಂದ ಕೈಬಿಡುವುದಿಲ್ಲ ಎಂಬ ಸಂದೇಶ ರವಾನಿಸಲು ಮುಂದಾಗಿರುವ ಕಾಂಗ್ರೆಸ್ ವಿಧಾನಪರಿಷತ್‌ಗೆ ಆಯ್ಕೆ ಮಾಡಲು ತೀರ್ಮಾನಿಸಿದೆ.
ಎನ್.ಎಸ್.ಬೋಸರಾಜು ಅವರು ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದು, ಪರಿಷತ್‌ಗೆ ಟಿಕೆಟ್ ನೀಡಲಾಗಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿರುವ ತಿಪ್ಪಣ್ಣಪ್ಪ ಅವರನ್ನೂ ಈ ಬಾರಿ ಮೇಲ್ಮನೆಗೆ ಕಳುಹಿಸಲು ಪಕ್ಷ ನಿರ್ಧರಿಸಿದೆ.