Pahalgam Attack | ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ಅನ್ಯಾಯ ಆಯ್ತು ಅಂತ ಒಪ್ಪಿಕೊಳ್ಳಿ; ಕೇಂದ್ರದ ವಿರುದ್ಧ ಸಂತೋಷ್ ಲಾಡ್ ಕೆಂಡ

Public TV
2 Min Read
Santosh Lad

– ಯಾರೊಬ್ಬರೂ ಅಮಿತ್‌ ಶಾ ರಾಜೀನಾಮೆ ಕೇಳ್ತಿಲ್ಲ ಎಂದ ಸಚಿವ

ಬೆಂಗಳೂರು: ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ನಡೆದಾಗ ಯಾರೊಬ್ಬರು ಭದ್ರತಾ ಸಿಬ್ಬಂದಿ ಇರಲಿಲ್ಲ.. ಮಾತಿಗೆ ಮುನ್ನ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಿಂದೂ-ಮುಸ್ಲಿಂ ಅಂತಾರೆ. ಹಾಗಾದ್ರೆ ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ಅನ್ಯಾಯ ಆಯ್ತು ಅಂತ ಒಪ್ಪಿಕೊಳ್ಳಿ ಅಂತ ಕೇಂದ್ರ ಸರ್ಕಾರದ ವಿರುದ್ಧ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಕಿಡಿ ಕಾರಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಹಲ್ಗಾಮ್ ಘಟನೆ ಬಗ್ಗೆ ಇಡೀ ದೇಶಕ್ಕೆ ಗೊತ್ತಿದೆ. ಪ್ರವಾಸಿಗರಿಗೆ ಆಗಿದ್ದು ಭಯಾನಕ ಘಟನೆ. ರಾಜಕೀಯ ಮಾತನಾಡಬಾರದು ಅಂದುಕೊಂಡಿದ್ದೇವೆ. ಆದರೆ ಕೆಲವಾರು ಪ್ರಶ್ನೆ ನಮ್ಮನ್ನ ಕಾಡುತ್ತಿವೆ. ಇಂತಹ ಘಟನೆಗಳು ನಡೆದಾಗ ಯಾವ ಕೇಂದ್ರ ಸಚಿವರೂ ಪ್ರತಿಕ್ರಿಯೆ ನೀಡಲ್ಲ. ನೇರವಾಗಿ ಬಂದು ಉತ್ತರ ಕೊಟ್ಟಿರೋದು ಬೆರಳೆಣಿಕೆಯಷ್ಟು ಸಚಿವರು ಮಾತ್ರ. ಕೇವಲ ಸ್ಟುಡಿಯೋಗಳಲ್ಲಿ ಪರ ವಿರೋಧ ಚರ್ಚೆಗಳು ಆಗ್ತಿವೆ. ಕೇಂದ್ರ ಸರ್ಕಾರದಲ್ಲಿ ಆದ ವೈಫಲ್ಯದ ಬಗ್ಗೆ ಯಾರೂ ಮಾತನಾಡ್ತಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಕೇಂದ್ರ ಗೃಹ ಸಚಿವರ ರಾಜೀನಾಮೆ ಯಾರೂ ಕೇಳ್ತಿಲ್ಲ. ನಮ್ಮ ಮಲ್ಲಿಕಾರ್ಜುನ ಖರ್ಗೆ ರಾಜೀನಾಮೆಕೇಳ್ತಿದ್ದಾರೆ. ಶ್ರೀನಗರದಲ್ಲಿ ಹೆಜ್ಜೆ ಹೆಜ್ಜೆಗೂ ಚೆಕ್‌ಪೋಸ್ಟ್ ಇದೆ. ಒಂದು ಹುಳನೂ ತಪ್ಪಿಸಿಕೊಂಡು ಹೋಗೋಕೆ ಆಗಲ್ಲ. ಗೃಹ ಸಚಿವರನ್ನ ಕೇಳ್ತೇನೆ, ದಾಳಿ ನಡೆದಾಗ ಯಾಕೆ ಒಬ್ಬ ಸೆಕ್ಯೂರಿಟಿನೂ ಇಲ್ಲ ಯಾಕೆ..? ಇದರ ಬಗ್ಗೆ ಚರ್ಚೆ ಆಗಬೇಕೇ ವಿನಃ ಬೇರೆಯದ್ದಕ್ಕಲ್ಲ. ಮಾತಿಗೆ ಮುನ್ನ ನಿಮ್ಮ ವೈಫಲ್ಯ ಮುಚ್ಚಿಕೊಳ್ಳಲು ಹಿಂದೂ-ಮುಸ್ಲಿಂ ಅಂತಾರೆ. ಹಾಗಾದ್ರೆ ನಿಮ್ಮ ಅವಧಿಯಲ್ಲಿ ಹಿಂದೂಗಳಿಗೆ ಅನ್ಯಾಯ ಆಯ್ತು ಅಂತ ಒಪ್ಪಿಕೊಳ್ಳಿ. ಇಂತಹ ದೊಡ್ಡ ಘಟನೆ ನಡೆದರೂ ಪ್ರಧಾನಿ ಮೋದಿ ಬಿಹಾರ ಚುನಾವಣೆ ಪ್ರಚಾರದಲ್ಲಿ ಭಾಗವಹಿಸ್ತಾರೆ ಅಂತ ಕೇಂದ್ರದ ವಿರುದ್ಧ ಹರಿಹಾಯ್ದರು.

ಮುಂದುವರಿದು ಮಾತನಾಡಿ, ಪುಲ್ವಾಮಾ ದಾಳಿ ಏನಾಯ್ತು, ಯಾರೂ ಚರ್ಚೆ ಮಾಡ್ತಿಲ್ಲ ಯಾಕೆ..? ಯಾಕೆ ಮೆರವಣಿಗೆ ಮಾಡ್ತೀರ, ನೀವು ಹಿಂದೂಗಳನ್ನ ಕೊಂದಿರೋದು. 20 ರಾಜ್ಯಗಳಲ್ಲಿ ನಿಮ್ಮ ಪಕ್ಷದವರೇ ಸಿಎಂ, ನೀವೆ ಪಿಎಂ, ಬರೀ ಹಿಂದೂ ಮುಸ್ಲಿಂ ಬಿಟ್ರೆ ಬೇರೆ ಏನೂ ಇಲ್ಲ. ಸರ್ಕಾರ ಬಂದು ಇವತ್ತು ವೈಫಲ್ಯ ಅಂತ ಹೇಳಿದೆ. ಇವರೇ ಆರ್ಟಿಕಲ್ 370 ರದ್ದು ಮಾಡಿದ್ರು, ಎಲ್ಲಾ ನಮ್ಮ ಕಂಟ್ರೋಲ್‌ನಲ್ಲೇ ಇದೆ ಅಂದ್ರು. ನಾನು ನೋಡಿದಂತೆ ಅಲ್ಲಿನ ಲೋಕಲ್ ಜನ ಬ್ಯೂಟಿಫುಲ್ ಆಗಿದ್ದಾರೆ. ಆದ್ರೆ ನಮಗಿಂತ ಹೆಚ್ಚಾಗಿ ಅಲ್ಲಿನ ಜನ ರಕ್ತ ಕಣ್ಣೀರು ಹಾಕ್ತಿದ್ದಾರೆ. ಅಲ್ಲಿ ಹೇಗೆ ಬಂದೂಕು ಬಂತು, ಅವರು ಹೇಗೆ ಬಂದ್ರು ಅದರ ಬಗ್ಗೆ ಚರ್ಚೆ ಮಾಡ್ತಿಲ್ಲ ಎಂದು ಕಿಡಿ ಕಾರಿದರು.

Share This Article