ಚಿತ್ರದುರ್ಗ: ಕಂಪ್ಯೂಟರ್ ಆಪರೇಟರ್ ಲಂಚ ಸ್ವೀಕರಿಸುವ ವೇಳೆ ಎಸಿಬಿ ಕೈಗೆ ಸಿಕ್ಕಿಬಿದ್ದ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ವಿವಿಪುರ ಗ್ರಾಮಪಂಚಾಯ್ತಿಯಲ್ಲಿ ನಡೆದಿದೆ.
ಹಳ್ಳಿಗಾಡಲ್ಲಿ ದುಡಿಮೆ ಇಲ್ಲದ ಕೈಗಳಿಗೆ ಕೆಲಸ ನೀಡಲು ಕೇಂದ್ರ ಸರ್ಕಾರ ಉದ್ಯೋಗ ಖಾತ್ರಿ ಯೋಜನೆ ತಂದಿದೆ. ಆದರೆ ಕೆರೆ ಹೂಳೆತ್ತುವ ಕಾಮಗಾರಿಯ ಹಣ ಬಿಡುಗಡೆ ಮಾಡಲು ಸಹ ಲಂಚ ಪಡೆಯುತಿದ್ದ ಕಂಪ್ಯೂಟರ್ ಆಪರೇಟರ್ ನರೇಂದ್ರಬಾಬು ಎಸಿಬಿ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ಮಾಲೀಕನನ್ನು ಚಿರತೆ ಬಾಯಿಂದ ತಪ್ಪಿಸಿದ ಶ್ವಾನ
ವಿವಿಪುರದಲ್ಲಿ ಯೋಜನೆಯ ಹಣ ಬಿಡುಗಡೆ ಮಾಡಲು ಓಂಕಾರಪ್ಪ ಎಂಬವರ ಬಳಿ ಗ್ರಾಮಪಂಚಾಯ್ತಿ ಕಂಪ್ಯೂಟರ್ ಆಪರೇಟರ್ ನರೇಂದ್ರಬಾಬು 5000 ರೂ. ಲಂಚ ಕೇಳಿದ್ದರು. ಆಗ ನೊಂದ ಓಂಕಾರಪ್ಪ ಎಸಿಬಿ ಅಧಿಕಾರಿಗಳ ಮೊರೆ ಹೋಗಿದ್ದರು. ಈ ವೇಳೆ ಗ್ರಾಮಪಂಚಾಯ್ತಿ ಕಚೇರಿ ಮೇಲೆ ದಿಢೀರ್ ದಾಳಿ ನಡೆಸಿ, ಕಾರ್ಯಾಚರಣೆ ನಡೆಸುವಾಗ ಎಸಿಬಿ ಬಲೆಗೆ ನರೆಂದ್ರಬಾಬು ಬಿದ್ದಿದ್ದಾರೆ.
ಎಸಿಬಿ ಪಿ.ಐ.ಪ್ರವೀಣ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಓಂಕಾರಪ್ಪ ಬಳಿ 5000 ರೂ. ಲಂಚ ತೆಗೆದುಕೊಳ್ಳುತ್ತಿದ್ದ ವೇಳೆ ನರೇಂದ್ರಬಾಬು ಸಿಕ್ಕಿಬಿದ್ದು, ಇಂಗು ತಿಂದ ಮಂಗನಂತಾಗಿದ್ದಾರೆ. ಇದನ್ನೂ ಓದಿ: 10 ಮಂದಿ ದರೋಡೆಕೋರರನ್ನು ಬಂಧಿಸಿದ ಶಿರಾಳಕೊಪ್ಪ ಪೊಲೀಸರು