ಬೆಂಗಳೂರು: ಮಂಗಳವಾರ ಬೆಳಗ್ಗೆ ಆರು ಗಂಟೆಯಿಂದ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಭ್ರಷ್ಟ ಅಧಿಕಾರಿಗಳ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಪ್ರಮುಖವಾಗಿ ಸಹಕಾರಿ ಇಲಾಖೆಯಲ್ಲಿ ಹೆಚ್ಚುವರಿ ನೋಂದಣಾ ಅಧಿಕಾರಿಯಾಗಿರುವ ಬಿಸಿ ಸತೀಶ್ ಅವರ ಬೆಂಗಳೂರಿನ ಬಸವೇಶ್ವರನಗರದ ಹತ್ತನೇ ಮುಖ್ಯ ರಸ್ತೆಯಲ್ಲಿರುವ ನಿವಾಸದ ಮೇಲೆ ದಾಳಿ ನಡೆದಿತ್ತು.
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಪ್ತರಾಗಿರುವ ಬಿಸಿ ಸತೀಶ್, ಒಂದೇ ಕಡೆ ಎರಡು ಐಷಾರಾಮಿ ಮನೆ ಮತ್ತು ಮೂರು ವಿವಿಧ ಅಕೌಂಟ್‍ಗಳಲ್ಲಿ ಮೂರು ಕೋಟಿಗೂ ಅಧಿಕ ಪ್ರಮಾಣದ ಹಣ, ಚಿನ್ನಾಭರಣ, ಕೋಟಿಗಟ್ಟಲೇ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಿಸಿ ಸತೀಶ್ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಪ್ತ ಕಮ್ ಪಿಎಸ್ ಕೂಡ ಆಗಿದ್ದು, ರಮೇಶ್ ಜಾರಕಿಹೊಳಿಗೆ ಸೇರಿದ ವಿವಿಧ ಆಸ್ತಿ ಪತ್ರಗಳು, ಸೇರಿದಂತೆ ಬಹುತೇಕ ಹಣದ ವ್ಯವಹಾರಗಳು ಸತೀಶ್ ನೋಡಿಕೊಳ್ಳುತ್ತಿದ್ದರು ಎನ್ನಲಾಗಿದೆ. ಈಗಾಗಲೇ ಕಾಂಗ್ರೆಸ್‍ಗೆ ಕೈಕೊಟ್ಟು, ಬಿಜೆಪಿ ಸೇರಲು ಬಯಸಿರುವ ಜಾರಕಿಹೊಳಿಗೆ ರಾಜ್ಯ ಸರ್ಕಾರ ಎಸಿಬಿ ಗಾಳದ ಮೂಲಕ ಶಾಕ್ ಕೊಡೋಕೆ ಮುಂದಾಗಿದ್ಯಾ…? ಅನ್ನೋ ಅನುಮಾನ ಎಲ್ಲರನ್ನು ಕಾಡುತ್ತಿದೆ.
ಇದೇ ವೇಳೆ ಜೆಬಿ ನಗರ ಸಬ್ ಡಿವಿಷನ್‍ನಲ್ಲಿ ಬಿಬಿಎಂಪಿ ಆಸಿಸ್ಟೆಂಟ್ ರೆವಿನ್ಯೂ ಆಫೀಸರ್ ಆಗಿರುವ ಮಂಜುನಾಥ್ ಮನೆ ಮೇಲು ದಾಳಿ ನಡೆಸಿದ್ದು, ಐಷಾರಾಮಿ ಮನೆ ಸೇರಿದಂತೆ ಕೋಟಿ ಕೋಟಿ ಮೌಲ್ಯದ ಅಕ್ರಮ ಆಸ್ತಿ ಪತ್ರಗಳು, ಭೂ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ದಾಳಿ ಮುಗಿದ ನಂತರವೇ ಏನೆಲ್ಲಾ ಸಿಕ್ತು ಆಸಲಿ ಸತ್ಯ ತಿಳಿಯಬೇಕಿದೆ.