Bellary
ಕಂದಾಯ ಸಚಿವರಿಗೆ ಲಂಚ ಕೊಡಬೇಕು ಎಂದಿದ್ದ ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ!

ಬಳ್ಳಾರಿ: ಕಂದಾಯ ಸಚಿವರಿಗೂ ನಾವು ಪ್ರತಿ ತಿಂಗಳು ಲಂಚ ಕೊಡಬೇಕು. ಅದಕ್ಕೆ ನಾವು ಜನರಿಂದ ಹಣ ವಸೂಲಿ ಮಾಡುತ್ತವೆ ಎಂದು ಹೇಳಿದ್ದ ಹೂವಿನ ಹಡಗಲಿಯ ಪ್ರಭಾರಿ ಸಬ್ ರಿಜಿಸ್ಟ್ರರ್ ಕೆ.ಮರಿಗಾದಿ ಅವರ ಮನೆ ಮೇಲೆ ಇಂದು ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿ ಗಳಿಸಿದ ಹಿನ್ನಲೆಯಲ್ಲಿ ಕೆ.ಮರಿಗಾದಿಯವರ ಮನೆ ಮೇಲೆ ದಾಳಿ ನಡೆಸಿದ ಎಸಿಬಿ ತಂಡ, ಹೊಸಪೇಟೆಯ ಬಸವೇಶ್ವರ ಬಡಾವಣೆಯಲ್ಲಿರುವ ಮನೆ ಸೇರಿದಂತೆ ಏಕಕಾಲದಲ್ಲಿ 6 ಕಡೆ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಅಧಿಕಾರಿ ಕೆ ಮರಿಗಾದಿ ಜಿಲ್ಲೆಯ ಹಗರಿಬೊಮ್ಮನಹಳ್ಳಿ, ಹೊಸಪೇಟೆಗಳಲ್ಲಿ ಈ ಹಿಂದೆ ಕಾರ್ಯ ನಿರ್ವಹಿಸಿದ್ದರು. ಎಸಿಬಿ ಎಸ್‍ಪಿ ಅನಿತಾ ಹದ್ದಣ್ಣನವರ್ ಹಾಗೂ ಡಿವೈಎಸ್‍ಪಿ ಗಿರೀಶ್ ನೇತೃತ್ವದಲ್ಲಿ ದಾಳಿ ಮಾಡಿರುವ ಅಧಿಕಾರಿಗಳು ಪ್ರಭಾರಿ ಉಪನೊಂದವಣಾಧಿಕಾರಿಯಾಗಿರುವ ಕೆ.ಮರಿಗಾದಿಯವರ ಕಚೇರಿ ಮತ್ತು ಸಂಬಂಧಿಕರ ಮನೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿ ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.
ಈ ಹಿಂದೆ ಇದೇ ಅಧಿಕಾರಿ ಕಂದಾಯ ಸಚಿವರಿಗೂ ನಾವೂ ಪ್ರತಿ ತಿಂಗಳು ಲಂಚ ಕೊಡಬೇಕು ಅದಕ್ಕೆ ಜನರಿಂದ ಜಣ ವಸೂಲಿ ಮಾಡುತ್ತೇವೆ ಅಂತಾ ಬಹಿರಂಗವಾಗಿ ಹೇಳಿಕೊಂಡಿದ್ದ ಸುದ್ದಿಯನ್ನು ಪಬ್ಲಿಕ್ ಟಿವಿ ಪ್ರಸಾರ ಮಾಡಿತ್ತು. ಪಬ್ಲಿಕ್ ಟಿವಿ ವರದಿ ಪ್ರಸಾರದ ನಂತರ ಮರಿಗಾದಿಯಪ್ಪ ಅಮಾನತುಗೊಂಡು ಇದೀಗ ಮರಳಿ ಸೇವೆಗೆ ಆಗಮಿಸಿದ್ದರು.
