ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ)ಯ ಭ್ರಷ್ಟಾಚಾರ ಬಯಲಾಗಿದೆ. ಬಿಬಿಎಂಪಿಯಲ್ಲಿ 1,000 ಕೋಟಿಗೂ ಅಧಿಕ ಅಕ್ರಮ ಪತ್ತೆಯಾಗಿದೆ.
ಬಿಬಿಎಂಪಿಯ ಕಂದಾಯ ವಿಭಾಗ, ಎಂಜಿನಿಯರಿಂಗ್ ವಿಭಾಗ ಹಾಗೂ ಟಿಡಿಆರ್ ವಿಭಾಗಗಳಿಗೆ ಸಂಬಂಧಿಸಿದಂತೆ ಎಸಿಬಿ ದಾಳಿ ನಡೆಸಿದೆ. ಈ ವೇಳೆ ಕಂದಾಯ ವಿಭಾಗ ಒಂದರಲ್ಲೇ 500 ಕೋಟಿಗೂ ಅಧಿಕ ಅಕ್ರಮ ನಡೆದಿದ್ದು, ಎಸಿಬಿ ದಾಳಿ ವೇಳೆ ಬೃಹತ್ ಭ್ರಷ್ಟಾಚಾರ ಬೆಳಕಿಗೆ ಬಂದಿದೆ. ಒಂದೇ ಕಾಮಗಾರಿಗೆ ಎರಡೆರಡು ಬಿಲ್ ನೀಡಿ ಭ್ರಷ್ಟಾಚಾರ ಮಾಡಲಾಗಿದೆ. ಬಹು ರಾಷ್ಟ್ರೀಯ ಕಂಪನಿಗಳಿಗೆ ಅಕ್ರಮ ಟಿಡಿಆರ್ ನೀಡಿರೋದು ಪತ್ತೆಯಾಗಿದೆ.
ಮಾಲ್ ಗಳು, ಬಹುರಾಷ್ಟ್ರೀಯ ಕಂಪನಿಗಳು ಹಾಗೂ ಅಪಾರ್ಟ್ ಮೆಂಟ್ ಗಳಿಂದ ತೆರಿಗೆ ದೋಖಾ ಮಾಡಲಾಗಿದೆ. ಸರ್ಕಾರದ ತೆರಿಗೆ ನಿಯಮಗಳಡಿ ತೆರಿಗೆ ವಿಧಿಸದೆ ಭಾರಿ ಗೋಲ್ಮಾಲ್ ನಡೆಸಲಾಗಿದೆ. ಅಲ್ಲದೆ ಕಾನೂನು ಬಾಹಿರವಾಗಿ ಅಕ್ಯುಪೇಷನ್ ಸರ್ಟಿಫಿಕೇಟ್ ಅನ್ನು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ನೀಡಿದ್ದಾರೆ. ಇದಲ್ಲದೆ ಎಂಜಿನಿಯರಿಂಗ್ ವಿಭಾಗದಲ್ಲಿ ಒಂದೇ ಕಾಮಾಗಾರಿಗೆ ಎರಡೆರಡು ಬಿಲ್, ನಡೆಯದ ಕಾಮಾಗಾರಿಗಳಿಗೂ ಬಿಲ್ ಮಾಡಿರುವುದು ಪತ್ತೆಯಾಗಿದೆ. ಇದನ್ನೂ ಓದಿ: ಮಂತ್ರಾಲಯದಲ್ಲಿ ಮಹಾಶಿವರಾತ್ರಿ ವಿಶೇಷ ಪೂಜೆ – ಭಕ್ತರಲ್ಲಿ ಸಂಭ್ರಮ
ಟಿಡಿಆರ್ ವಿಭಾಗದಲ್ಲಿ ಅಕ್ರಮವಾಗಿ ಹೆಚ್ಚು ವಿಸ್ತೀರ್ಣದ ಡಿಸಿಆರ್ ಗಳನ್ನು ನೀಡಿರುವುದು ಬೆಳಕಿಗೆ ಬಂದಿದೆ. ಅಲ್ಲದೆ ಹಲವು ಬಹು ರಾಷ್ಟ್ರೀಯ ಕಂಪನಿಗಳಿಗೆ ಅಕ್ರಮ ಟಿಡಿಆರ್ ನೀಡಿರುವುದು ಪತ್ತೆಯಾಗಿದೆ. ಸದ್ಯ ಈ ಸಂಬಂಧ ಹಲವು ದಾಖಲಾತಿಗಳನ್ನು ಎಸಿಬಿ ವಶಪಡಿಸಿಕೊಂಡಿದ್ದು, ಇಂದೂ ದಾಲಿ ಮುಂದುವರಿಯಲಿದೆ.