Bengaluru City
ಬೆಳ್ಳಂಬೆಳಗ್ಗೆ ರಾಜ್ಯದ ಹಲವೆಡೆ ಎಸಿಬಿಯಿಂದ ಭ್ರಷ್ಟರ ಬೇಟೆ- ಬೆಂಗ್ಳೂರಲ್ಲಿ 8 ಕಡೆ ದಾಳಿ

ಬೆಂಗಳೂರು: ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಭ್ರಷ್ಟ ಕುಳಗಳಿಗೆ ಶಾಕ್ ಕೊಟ್ಟಿದ್ದಾರೆ. ಬೀದರ್, ಬೆಳಗಾವಿ, ಗದಗ, ಹುಬ್ಬಳ್ಳಿ, ಶಿವಮೊಗ್ಗ, ಬೆಂಗಳೂರು ಮೊದಲಾದ ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಬೀದರ್ ಜಿಲ್ಲೆಯ ಔರಾದ್ ತಾಲೂಕು ಪಂಚಾಯತಿ ಇಓ ಜಗನ್ನಾಥ ಮಾಣಿಕಪ್ಪ ಹೋತಗಿ ನಿವಾಸದ ಮೇಲೆ ಎಸಿಬಿ ಎಸ್.ಪಿ ಅನೀತ್ ಹದ್ದಣ್ಣನವರ್ ನೇತೃತ್ವದಲ್ಲಿ ದಾಳಿ ನಡೆದಿದೆ. ಬೆಳಗಾವಿಯಲ್ಲಿ ಡೆಪ್ಯೂಟಿ ತಹಶಿಲ್ದಾರ್ ಸಲೀಂ ಸಾಬುಸಾಬ್ ಸೈಯದ್ ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿ ಅಕ್ರಮ ಆಸ್ತಿಗಳ ದಾಖಲೆಗಳನ್ನ ವಶ ಪಡಿಸಿಕೊಂಡಿದ್ದಾರೆ. ಗದಗ ಜಿಲ್ಲೆಯಲ್ಲೂ ಎಸಿಬಿ ಇನ್ಸ್ ಪೆಕ್ಟರ್ ಮಹಾಂತೇಶ ನೇತೃತ್ವದಲ್ಲಿ ದಾಳಿ ನಡೆದಿದ್ದು ಯಾವಗಲ್ ಗ್ರಾಮಪಂಚಾಯತ್‍ನ 2015-16 ನೇ ಸಾಲಿನ ಯೋಜನೆಗಳ ಅವ್ಯವಹಾರ ಕುರಿತು ಕಾಮಗಾರಿಯ ಕಡತಗಳ ಪರಿಶೀಲನೆ ನಡೆಯುತ್ತಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯ ಸಹಾಯಕ ಆಯುಕ್ತ ಕರಿಯಪ್ಪ ಕರ್ನಲ್ ಮನೆಯ ಮೇಲೆ ಎಸಿಬಿ ದಾಳಿ ನಡೆದಿದ್ದು, ಇವರ ಸ್ನೇಹಿತರ ಮನೆಗಳಲ್ಲೂ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಶಿವಮೊಗ್ಗದಲ್ಲಿ ಆರ್‍ಟಿಓ ಇನ್ಸ್‍ಪೆಕ್ಟರ್ ಕರುಣಾಕರ್ ಮನೆ ಮೇಲೆ ಎಸಿಬಿ ವೃತ್ತ ನಿರೀಕ್ಷಕ ಹಾಗೂ ಚಿತ್ರದುರ್ಗದ ಎಸಿಬಿ ವೃತ್ತ ನಿರೀಕ್ಷಕ ಪ್ರಕಾಶ್ ನೇತೃತ್ವದಲ್ಲಿ ದಾಳಿ ನಡೆದಿದೆ.
ಬೆಂಗಳೂರಿನಲ್ಲೂ ಎಂಟು ಕಡೆಗಳಲ್ಲಿ ಎಸಿಬಿ ಅಧಿಕಾರಿಗಳು ಬಲೆ ಬೀಸಿದ್ದು, ಜಯನಗರದ 3 ನೇ ಹಂತದಲ್ಲಿರುವ ಬಿಬಿಎಂಪಿಯ ಚೀಫ್ ಎಂಜಿನಿಯರ್ ಆಗಿರುವ ಕೆಟಿ ನಾಗರಾಜು ನಿವಾಸದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ. ಜಯನಗರ 4 ನೇ ಹಂತದಲ್ಲಿರುವ ಬಿಡಿಎ ಎಇಇ ಕುಮಾರ್ ನಿವಾಸ ಸೇರಿದಂತೆ ಹಾಸನದಲ್ಲೂ 2 ಕಡೆಗಳಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಗಳೂರಿನಲ್ಲಿ 2 ಡಿವೈಎಸ್‍ಪಿ ಮತ್ತು ಹಾಸನದಲ್ಲಿ 2 ಡಿವೈಎಸ್ ಪಿ ನೇತೃತ್ವದಲ್ಲಿ ಅಕ್ರಮ ದಾಖಲೆಗಳ ಶೋಧ ಕಾರ್ಯ ನಡೆಯುತ್ತಿದೆ.
