ತುಮಕೂರು: ನ್ಯಾಯ ಕೊಡಿಸಬೇಕಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್ ಲಂಚ ಪಡೆಯುತ್ತಿದ್ದಾಗ ಕೋರ್ಟ್ ಆವರಣದಲ್ಲೇ ಎಸಿಬಿ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆ ತಿಪಟೂರು ನ್ಯಾಯಾಲಯ ಆವರಣದಲ್ಲಿ ಕೆಇಬಿ ಎಂಜಿನಿಯರ್ ಗುರುಬಸವಸ್ವಾಮಿ ಎಂಬುವರಿಂದ 20 ಸಾವಿರ ರೂಪಾಯಿ ಲಂಚ ಸ್ವೀಕರಿಸುವ ವೇಳೆ ಪಿಪಿ ಪೂರ್ಣಿಮಾ ಅವರು ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.
ಏನಿದು ಪ್ರಕರಣ?
2015ರಲ್ಲಿ ಗಾಳಿಮಳೆಗೆ ಬಿದಿದ್ದ ಮರ ಮತ್ತು ವಿದ್ಯುತ್ ಕಂಬದ ತೆರವು ಕಾರ್ಯಾಚರಣೆಯನ್ನು ಅರಣ್ಯ ಇಲಾಖೆ ಹಾಗೂ ಬೆಸ್ಕಾಂ ನಡೆಸಿತ್ತು. ಆಗ ವೃದ್ಧೆಯೊಬ್ಬರು ಗಾಯಗೊಂಡಿದ್ದರು. ಬಳಿಕ ವೃದ್ಧೆ ಸಂಬಂಧಿಕರು ಎರಡೂ ಇಲಾಖೆ ವಿರುದ್ಧ ತಿಪಟೂರು ನಗರ ಠಾಣೆಯಲ್ಲಿ ದೂರು ಕೊಟ್ಟಿದ್ದರು.
ಈ ಪ್ರಕರಣದ ಸಂಬಂಧ 40 ಸಾವಿರ ರೂ. ಗೆ ಪೂರ್ಣಿಮಾ ಬೇಡಿಕೆ ಇಟ್ಟಿದ್ದರು. ಅದರಂತೆ 20 ಸಾವಿರ ರೂ.ಗಳನ್ನು ಅಕೌಂಟ್ ವರ್ಗಾವಣೆ ಮಾಡಿಸಿಕೊಂಡಿದ್ದರು. ಉಳಿದ 20 ಸಾವಿರ ರೂ.ಗಳನ್ನು ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ 3 ತಿಂಗಳಿಂದ ತಿಪಟೂರು ಕೋರ್ಟ್‍ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೂರ್ಣಿಮಾ ಅವರು ಈ ಹಿಂದೆ ಚಿಕ್ಕಮಗಳೂರು, ಕಡೂರಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಲ್ಲಿ ಕೂಡಾ ಭ್ರಷ್ಟಾಚಾರದ ಆರೋಪ ಕೇಳಿ ಬಂದಿತ್ತು.
ಮೂಲತಃ ಪೂರ್ಣಿಮಾ ಅವರು ಭದ್ರಾವತಿಯ ಮೂಲವರಾಗಿದ್ದು, ಪ್ರಕರಣದ ಸಂಬಂಧ ಅವರನ್ನು ಎಪಿಪಿ ಕಚೇರಿಯಲ್ಲೇ ಎಸಿಬಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾರೆ. ಲಂಚ ಸ್ವೀಕರಿಸುವ ವೇಳೆ ಶರಣಪ್ಪ ಎಂಬ ಡಿ ಗ್ರೂಪ್ ನೌಕರನನ್ನು ಮಧ್ಯವರ್ತಿಯಾಗಿ ಬಳಸಿಕೊಂಡಿದ್ದರು ಎಂಬ ಮಾಹಿತಿ ಲಭಿಸಿದೆ.