ಯಾದಗಿರಿ: ನ್ಯಾಯ ದೊರಕಿಸಬೇಕಿದ್ದ ಸರ್ಕಾರಿ ವಕೀಲರೊಬ್ಬರು ಲಂಚ ಸ್ವೀಕರಿಸುವಾಗ ಎಸಿಬಿ ಬಲೆಗೆ ಸಿಕ್ಕಿಬಿದ್ದ ಘಟನೆ ಯಾದಗಿರಿ ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆದಿದೆ.
ಜಿಲ್ಲಾ ನ್ಯಾಯಾಲಯದ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಹಿರಿಯ ವಕೀಲ ಗೋಪಾಲರಾವ್ ಅವರು ಲಂಚ ಸ್ವೀಕರಿಸುವ ವೇಳೆ ಎಸಿಬಿ ಬಲೆಗೆ ಬಿದ್ದಿದ್ದಾರೆ. ನ್ಯಾಯಾಲಯದ ಆವರಣದಲ್ಲಿರುವ ತನ್ನ ಕಚೇರಿಯಲ್ಲಿ, ಕಕ್ಷಿದಾರರಿಂದ ಲಂಚ ಸ್ವೀಕರಿಸುವ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲೆಯ ಅಬ್ಬೆ ತುಮಕೂರಿನ ನಿವಾಸಿ ವಿಶಾಲಕ್ಷಿ ಅವರಿಗೆ ಸಂಬಂಧಿಸಿದ ಪ್ರಕರಣ ಸಂಬಂಧ ವಾದಿಸಲು ಜಿಲ್ಲಾ ನ್ಯಾಯಾಲಯ ಗೋಪಾಲರಾವ್ ಅವರನ್ನು ನೇಮಿಸಿತ್ತು. ಸರ್ಕಾರಿ ವಕೀಲರು ಕಕ್ಷಿದಾರರಿಂದ ಯಾವುದೇ ಹಣ ತೆಗೆದುಕೊಳ್ಳಬಾರದೆಂಬ ನಿಯಮವಿದೆ. ಹೀಗಿದ್ದರೂ ವಿಶಾಲಕ್ಷಿ ಅವರ ಪ್ರಕರಣದಲ್ಲಿ ವಾದ ಮಂಡನೆ ಮಾಡಲು ವಕೀಲ ಗೋಪಾಲರಾವ್ 50 ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು.
50 ಸಾವಿರ ರೂ. ನೀಡಲು ಇಲ್ಲದ ಕಾರಣ 10 ಸಾವಿರ ರೂ. ನೀಡಲು ವಿಶಾಲಕ್ಷಿ ಒಪ್ಪಿದ್ದರು. ವಕೀಲರಿಗೆ ನೀಡಲು ಹಣ ಇಲ್ಲದ ಸಂದರ್ಭದಲ್ಲಿ ವಿಶಾಲಕ್ಷಿ ಅವರು ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ದೂರಿನ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋಪಾಲರಾವ್ ಈಗಾಗಲೇ ಮುಂಗಡವಾಗಿ 5 ಸಾವಿರ ರೂಪಾಯಿ ಪಡೆದಿದ್ದು, ಇಂದು ಬಾಕಿ ಹಣ ಸ್ವೀಕರಿಸುವಾಗ ಎಸಿಬಿ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ. ಇದನ್ನು ಓದಿ : ನ್ಯಾಯಾಲಯ ಆವರಣದಲ್ಲೇ ಭ್ರಷ್ಟಾಚಾರ – ಎಸಿಬಿಗೆ ಬಲೆಗೆ ಬಿದ್ದ ಪಬ್ಲಿಕ್ ಪ್ರಾಸಿಕ್ಯೂಟರ್