ಬಳ್ಳಾರಿ: ಚುನಾವಣಾ ಮತಗಟ್ಟೆಯ ಮುಂಭಾಗದಲ್ಲಿ ಸೇರಿದ್ದ ಜನರನ್ನ ಚದುರಿಸಲು ಕೈಯಲ್ಲಿ ಲಾಠಿ ಹಿಡಿದಿದ್ದ ದೃಶ್ಯವನ್ನು ಚಿತ್ರೀಕರಿಸಿದ್ದಕ್ಕೆ ಮಾಧ್ಯಮದವರ ವಿರುದ್ಧ ಹೊಸಪೇಟೆ ಚುನಾವಣಾ ಅಧಿಕಾರಿ ಗಾರ್ಗಿ ಜೈನ್ ದರ್ಪ ಮೆರೆದಿದ್ದಾರೆ.
ಮೊಬೈಲ್ ನಲ್ಲಿ ಸೆರೆ ಹಿಡಿದ ದೃಶ್ಯಗಳು ಚಾನೆಲ್ ನಲ್ಲಿ ಪ್ರಸಾರ ಮಾಡಿದರೆ ಚಾನೆಲ್ ಬಂದ್ ಮಾಡಿಸುವ ಬೆದರಿಕೆಯನ್ನ ಕೂಡ ಹಾಕಿದ್ದಾರೆ. ಶನಿವಾರ ಸಂಜೆ ಆರು ಗಂಟೆಯ ಸುಮಾರಿಗೆ ಹೊಸಪೇಟೆ ನಗರದ ರೋಟರಿ ವೃತ್ತದಲ್ಲಿನ ಪಿಂಕ್ ಮತಗಟ್ಟೆ ಸಂಖ್ಯೆ 9ರ ಮುಂಭಾಗದಲ್ಲಿ ತಡವಾಗಿ ಮತದಾನಕ್ಕೆ ಸುಮಾರು ಎರಡು ನೂರಕ್ಕೂ ಹೆಚ್ಚು ಜನ ಸೇರಿದ್ದರು.
ಈ ವೇಳೆ ಸೇರಿದ್ದ ಜನರನ್ನು ನಿಯಂತ್ರಿಸುವುದಕ್ಕಾಗಿ ಎಸಿ ಗಾರ್ಗಿ ಜೈನ್ ಕೈಯಲ್ಲಿ ಲಾಟಿ ಹಿಡಿದು ರಸ್ತೆಯಲ್ಲಿ ನಿಂತಿದ್ದವರ ಮೇಲೆ ಲಾಟಿ ಬೀಸಿದ್ದಾರೆ. ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಖಾಸಗಿ ವಾಹಿನಿಯ ವರದಿಗಾರ ಎಸಿ ಗಾರ್ಗಿ ಜೈನ್ ಲಾಟಿದು ರಸ್ತೆಯಲ್ಲಿ ಓಡಾಡುವುದುನ್ನ ಚಿತ್ರೀಕರಿಸಿ ಸುದ್ದಿಮಾಡಲು ಮುಂದಾಗಿದ್ದಾರೆ. ಆಗ ಎಸಿ ಗಾರ್ಗಿ ಜೈನ್ ನನ್ನ ವೀಡಿಯೋ ಯಾಕೆ ಚಿತ್ರೀಕರಣ ಮಾಡುತ್ತಿದ್ದೀರಿ? ವಿಡಿಯೋ ಡಿಲೀಟ್ ಮಾಡಿ ಅಂತಾ ಧಮ್ಕಿ ಹಾಕಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಪೊಲೀಸರು ಭದ್ರತೆಗೆ ನಿಯೋಜನೆಗೊಂಡಿರುವ ವೇಳೆಯಲ್ಲಿ ಎಸಿ ಗಾರ್ಗಿ ಜೈನ್ ಕೈಯಲ್ಲಿ ಲಾಠಿ ಹಿಡಿದು ದರ್ಪ ಮೆರೆದಿದ್ದು ಸರಿಯೇ ಎಂದು ಜನ ಪ್ರಶ್ನಿಸುತ್ತಿದ್ದಾರೆ.