CrimeLatestNational

ನನಗೆ ಹಣ, ಆಸ್ತಿ ಬೇಡ- ತಂದೆಯನ್ನ ಗಲ್ಲಿಗೇರಿಸಿ: ಅಮೃತಾ ಆಕ್ರೋಶದ ಮಾತು

Advertisements

ಹೈದರಾಬಾದ್: ದೇಶಾದ್ಯಂತ ಸಂಚಲನ ಹುಟ್ಟಿಸಿದ್ದ ಪ್ರಣಯ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಅಮೃತ ಪೊಲೀಸರಲ್ಲಿ ಮನವಿಯನ್ನು ಮಾಡಿಕೊಂಡಿದ್ದಾರೆ. ನನಗೆ ಡಬಲ್ ಬೆಡ್ ರೂಮ್, ಕೃಷಿ ಜಮೀನು, ಹಣ ಯಾವುದೂ ಬೇಡ. ಪ್ರಣಯ್ ನನ್ನು ಕೊಂದ ನನ್ನ ತಂದೆ ಸೇರಿದಂತೆ ಇತರೆ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಿ. ಅಷ್ಟೇ ಸಾಕು ನನಗೆ ಎಂದು ಅಮೃತಾ ಹೇಳಿದ್ದಾರೆ.

ಕಳೆದ ಕೆಲವು ದಿನಗಳಿಂದ ಫೇಸ್‍ಬುಕ್ ಮತ್ತು ಇನ್ಸ್ ಸ್ಟಾಗ್ರಾಮ್ ಮುಖಾಂತರ ಹಲವು ಮೆಸೇಜ್‍ಗಳು ಬಂದಿದೆ. ಹಲವರು ಪ್ರಣಯ್ ಸಾವಿನ ಬಳಿಕ ಸರ್ಕಾರ ನೀಡುವ ಆಸ್ತಿಯನ್ನು ಪಡೆದುಕೊಳ್ಳುವುದರ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು ಸರ್ಕಾರ ನೀಡುವ ಸೌಲಭ್ಯ ನಿಮ್ಮ ಭವಿಷ್ಯಕ್ಕೆ ಸಹಕಾರಿ ಆಗಲಿದ್ದು, ಸ್ವೀಕರಿಸುವುದರಲ್ಲಿ ಯಾವುದೇ ತಪ್ಪಿಲ್ಲ ಎಂಬ ಮೆಸೇಜ್ ಗಳು ಬರುತ್ತಿವೆ ಅಂತ ತಿಳಿಸಿದರು. ಇದನ್ನೂ ಓದಿ:  ಮರ್ಯಾದಾ ಹತ್ಯೆಗೆ ಬಲಿಯಾದ ಪ್ರಣಯ್ ಬದುಕಿರುವುದು ಈ ವಿಡಿಯೋದಲ್ಲಿ ಮಾತ್ರ

ನನಗೆ ಸರ್ಕಾರ ನೀಡುತ್ತಿರುವ ಪರಿಹಾರ ಬೇಕಾಗಿಲ್ಲ. ನಾವು ಆರ್ಥಿಕವಾಗಿಯೂ ಸಬಲರಾಗಿ ಇದ್ದೇವೆ. ಮನೆ, ಕೃಷಿ ಭೂಮಿ, ಉದ್ಯೋಗ ಮತ್ತು ಹಣ ನೀಡಿ ಎಂದು ಯಾರ ಬಳಿಯೂ ನಾನಾಗಲಿ ಅಥವಾ ಕುಟುಂಬಸ್ಥರು ಕೇಳಿಕೊಂಡಿಲ್ಲ. ಪ್ರಣಯ್ ಕೊಂದ ಅಪರಾಧಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ನನ್ನ ಮನವಿ ಆಗಿದೆ ಎಂದು ಅಮೃತ ಸ್ಪಷ್ಟಪಡಿಸಿದ್ದಾರೆ.

ಸರ್ಕಾರದಿಂದ ಉದ್ಯೋಗ:
ತೆಲಂಗಾಣ ಪರಿಶಿಷ್ಟ ಜಾತಿ ಅಭಿವೃದ್ಧಿ ಸಚಿವ ಜಿ. ಜಗದೀಶ್ ರೆಡ್ಡಿ ಅವರು ನಲ್ಗೊಂಡ ಜಿಲ್ಲೆಯ ಮಿರಿಯಾಲಗುಡದಲ್ಲಿ ಮೃತ ಪ್ರಣಯ್ ಕುಟುಂಬದವರನ್ನು ಭೇಟಿ ಮಾಡಿ ಸಂತಾಪ ವ್ಯಕ್ತಪಡಿಸಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಇಂತಹ ಘಟನೆಗಳು ಪ್ರಸ್ತುತ ದಿನಗಳಲ್ಲಿ ಇನ್ನೂ ನಡೆಯುತ್ತಿವೆ ಎಂದು ನಾಚಿಕೆ ಆಗುತ್ತದೆ. ಈ ಪ್ರಕರಣದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮರ್ಯಾದಾ ಹತ್ಯೆ: 13 ವರ್ಷದ ಹಿಂದೆ ಮದ್ವೆಯಾದ ದಂಪತಿಯನ್ನು ಕೊಂದೇ ಬಿಟ್ಟ!

ಮೃತ ಪ್ರಣಯ್ ಪತ್ನಿ ಅಮೃತವರ್ಶಿನಿ ಅವರಿಗೆ ಸರ್ಕಾರಿ ಉದ್ಯೋಗ ನೀಡಲಾಗುವುದು. ಜೊತೆಗೆ ಕೃಷಿ ಭೂಮಿ ಮತ್ತು ಡಬಲ್ ಬೆಡ್ ರೂಮ್ ಮನೆಯನ್ನು ನೀಡುತ್ತೇವೆ. ಈಗಾಗಲೇ ಪ್ರಣಯ್ ಕುಟುಂಬದವರಿಗೆ ತಕ್ಷಣದ ವೆಚ್ಚಕ್ಕಾಗಿ ಸರ್ಕಾರ 8.25 ಲಕ್ಷ ರೂ. ಅನುಮೋದಿಸಿದೆ. ಇದರ ಜೊತೆ ನಾನು ವೈಯಕ್ತಿಕವಾಗಿ ಅಮೃತಾಗೆ 4.12 ಲಕ್ಷ ರೂ. ಚೆಕ್ ನೀಡಿದ್ದೇನೆ ಎಂದು ತಿಳಿಸಿದ್ದರು. ಸರ್ಕಾರದ ಸೌಲಭ್ಯಗಳನ್ನು ಅಮೃತ ಪಡೆದಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

ಏನಿದು ಪ್ರಕರಣ..?
ಪ್ರಣಯ್ ಮತ್ತು ಅಮೃತ ಇಬ್ಬರು ಪ್ರೀತಿಸಿದ್ದು, ಎರಡೂ ಕುಟುಂಬಗಳ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದವು. ಇಬ್ಬರ ಜಾತಿ ಬೇರೆಯಾಗಿದ್ದರಿಂದ ಅಮೃತಾ ಮನೆಯಲ್ಲಿ ತೀವ್ರ ವಿರೋಧ ವ್ಯಕ್ತವಾಗಿತ್ತು. ಆದರೂ ಯುವ ಜೋಡಿ ಮನೆಯವರ ವಿರೋಧದ ನಡುವೆಯೂ ಮದುವೆ ಆಗಿದ್ದರು. ಆದರೆ ಸೆಪ್ಟೆಂಬರ್ 15 ಶನಿವಾರ ಪ್ರಣಯ್ ಮತ್ತು ಅಮೃತಾ ಆಸ್ಪತ್ರೆ ಮುಂದೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಹಿಂದಿನಿಂದ ಬಂದ ವ್ಯಕ್ತಿಯೊಬ್ಬ ಮಚ್ಚಿನಿಂದ ಪ್ರಣಯ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದನು. ಆದರೆ ಪ್ರಣಯ್ ಕೊಲೆಗೆ ಆತನ ಮಾವ ಮಾರುತಿ ರಾವ್ ಬರೋಬ್ಬರಿ ಒಂದು ಕೋಟಿ ರೂ. ಹಣವನ್ನು ಹಂತಕರಿಗೆ ನೀಡಿದ್ದನು ಎಂದು ತನಿಖೆ ವೇಳೆ ಬೆಳಕಿಗೆ ಬಂದಿತ್ತು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv 

Leave a Reply

Your email address will not be published.

Back to top button