LatestLeading NewsMain PostNational

ಪೋರ್ಚುಗಲ್‌ಗೆ ನೀಡಿದ ವಾಗ್ದಾನದಂತೆ ಅಬು ಸಲೇಂನನ್ನು ಬಿಡುಗಡೆ ಮಾಡಿ – ಕೇಂದ್ರಕ್ಕೆ ಸುಪ್ರೀಂ

Advertisements

ನವದೆಹಲಿ: 1993ರ ಮುಂಬೈ ಬಾಂಬ್‌ ಸ್ಫೋಟ ಪ್ರಕರಣದ ದೋಷಿ ಗ್ಯಾಂಗ್‌ಸ್ಟರ್‌ ಅಬು ಸಲೇಂ 25 ವರ್ಷ ಜೈಲು ಶಿಕ್ಷೆ ಪೂರ್ಣಗೊಂಡ ಬಳಿಕ ಬಿಡುಗಡೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಹೇಳಿದೆ.

2002 ರಲ್ಲಿ ಪೋರ್ಚುಗಲ್‌ ಸರ್ಕಾರಕ್ಕೆ ನೀಡಿದ ವಾಗ್ಧಾನಕ್ಕೆ ಗೌರವ ನೀಡಬೇಕು. ವಾಗ್ದಾನ ನೀಡಿದಂತೆ 25 ವರ್ಷಗಳ ಜೈಲು ಶಿಕ್ಷೆಯ ಅವಧಿ ಪೂರ್ಣಗೊಂಡ ಬಳಿಕ ಬಿಡುಗಡೆ ಮಾಡಬೇಕು ಎಂದು ನ್ಯಾ. ಎಸ್‌.ಕೆ.ಕೌಲ್‌ ಮತ್ತು ಎಂಎಂ ಸುಂದರೇಶ್‌ ಅವರಿದ್ದ ಪೀಠ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಶಿಕ್ಷೆ ಮುಗಿದ 1ತಿಂಗಳ ಒಳಗಡೆ ಸಂಬಂಧಿಸಿದ ದಾಖಲೆಗಳನ್ನು ಕಳುಹಿಸಬೇಕು ಎಂದು ಕೋರ್ಟ್‌ ಹೇಳಿದೆ.

ತನ್ನ ಕಕ್ಷಿದಾರರ ಶಿಕ್ಷೆ ಅವಧಿಯನ್ನು ಯಾವುದೇ ಕಾರಣಕ್ಕೂ ವಿಸ್ತರಿಸಬಾರದು ಎಂದು ಸಲೇಂ ಪರ ವಕೀಲರು ಕೋರ್ಟ್‌ನಲ್ಲಿ ವಾದಿಸಿದ್ದರು. ಈ ವಾದವನ್ನು ಕೋರ್ಟ್‌ ಪುರಸ್ಕರಿಸಿದೆ. ಆದರೆ ತನ್ನ ಹಸ್ತಾಂತರವನ್ನು ರದ್ದುಗೊಳಿಸುವಂತೆ ಕೋರಿ ಸಲೇಂ ಮಾಡಿದ ಮನವಿಯನ್ನು ಕೋರ್ಟ್‌ ವಜಾಗೊಳಿಸಿದೆ.

ಮುಂಬೈ ಮೂಲದ ಬಿಲ್ಡರ್‌ ಪ್ರದೀಪ್‌ ಜೈನ್‌ ಮತ್ತು ಚಾಲಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯ 2015ರ ಫೆ. 25 ರಂದು ಸಲೇಂಗೆ ಜೀವಾವಾಧಿ ಶಿಕ್ಷೆ ವಿಧಿಸಿತ್ತು. ಇದನ್ನೂ ಓದಿ: ಒಂದೇ ಆಟೋದಲ್ಲಿ 27 ಮಂದಿ ಪ್ರಯಾಣ- ದಿಗ್ಭ್ರಮೆಗೊಂಡ ಪೊಲೀಸರು

ಭಾರತಕ್ಕೆ ಹಸ್ತಾಂತರಿಸುವಾಗ ತನ್ನ ಶಿಕ್ಷೆಯ ಅವಧಿಯು 25 ವರ್ಷ ಮೀರುವುದಿಲ್ಲ ಎಂದು ಕೇಂದ್ರ ಸರ್ಕಾರ ಪೋರ್ಚುಗಲ್‌ಗೆ ತಿಳಿಸಿತ್ತು. ಈ ವಾಗ್ದಾನವನ್ನು ಅಂದಿನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ನೀಡಿದ್ದರು ಎಂದು ಸಲೇಂ ವಾದಿಸಿದ್ದ.

2002ರಲ್ಲಿ ಗೆಳತಿ ಚಿತ್ರನಟಿ ಮೋನಿಕಾ ಬೇಡಿ ಜೊತೆ ಪೋರ್ಚುಗಲ್‌ನ ಲಿಸ್ಬನ್‌ನಲ್ಲಿ ಅಬು ಸಲೇಂನನ್ನು ಬಂಧಿಸಲಾಗಿತ್ತು. ಹಲವು ಸುತ್ತಿನ ಕಾನೂನು ಸಮರದ ಬಳಿಕ ಅಬು ಸಲೇಂನನ್ನು ಪೋರ್ಚುಗಲ್‌ 2005ರಲ್ಲಿ ಭಾರತಕ್ಕೆ ಹಸ್ತಾಂತರಿಸಿತ್ತು.

Live Tv

Leave a Reply

Your email address will not be published.

Back to top button