ಶರಣ್ ನಟನೆಯ ಚಿತ್ರಗಳೆಂದ ಮೇಲೆ ಹೊಟ್ಟೆ ಹುಣ್ಣಾಗುವಂತೆ ನಗುವ ಭಾಗ್ಯ ಖಾಯಂ ಎಂಬ ಅಭಿಪ್ರಾಯ ಪ್ರೇಕ್ಷಕರಲ್ಲಿದೆ. ಒಂದು ಗಟ್ಟಿಯಾದ ಕಥೆಯ ಜೊತೆಗೆ ನಗುವಿಗೂ ಕೊರತೆಯಿಲ್ಲದಂತೆ ಇದೀಗ ವಿಕ್ಟರಿ2 ಚಿತ್ರ ಯಶಸ್ವಿ ಪ್ರದರ್ಶನ ಆರಂಭಿಸಿದೆ. ಒಂದು ಕಾಡುವಂಥಾ ಕಥೆ ಮತ್ತು ಅದರಾಚೆಗೂ ನಗುವನ್ನೇ ಪಸರಿಸೋ ಗುಣಗಳೊಂದಿಗೆ ಮೂಡಿ ಬಂದಿರೋ ವಿಕ್ಟರಿ 2 ಪ್ರೇಕ್ಷಕರಿಗೆಲ್ಲ ಕಂಪ್ಲೀಟ್ ಮನರಂಜನೆ ನೀಡೋ ಚಿತ್ರವಾಗಿ ಹೊರ ಹೊಮ್ಮಿದೆ.
Advertisement
ಚೂರು ಮೈಮರೆತರೂ ಚದುರಿ ಹೋಗುವಂಥಾ ಕಥೆಯೊಂದನ್ನು ಅಚ್ಚುಕಟ್ಟಾಗಿ ನಿಭಾಯಿಸುವಲ್ಲಿಯೂ ನಿರ್ದೇಶಕ ಸಂತು ಗೆದ್ದಿದ್ದಾರೆ. ಇಬ್ಬರು ಸಹೋದರರ ನಡುವೆ ಶುರುವಾಗೋ ಆಸ್ತಿ ಕಲಹದಿಂದಲೇ ಶುರುವಾಗೋ ಕಥೆ. ಒಬ್ಬನ ಮಡದಿಗೆ ಎಲ್ಲವೂ ತನ್ನದಾಗಬೇಕೆಂಬ ಅತಿಯಾಸೆ. ಇನ್ನೊಬ್ಬಾಕೆಗೆ ಪಾಲಿಗೆ ಬಂದದ್ದೇ ಪಂಚಾಮೃತ ಎಂಬ ಭಾವ. ಆದ್ದರಿಂದಲೇ ತಮ್ಮ ಪಾಲಿಗೆ ಕುತಂತ್ರದಿಂದಲೇ ಬಂದ ಬರಡು ಭೂಮಿಯಲ್ಲಿಯೇ ಕೃಷಿ ಮಾಡೋ ಸಂಕಲ್ಪ ಮಾಡುತ್ತಾರೆ. ಆದರೆ ಬರಡು ಭೂಮಿಯ ಮಾಲೀಕ ದಂಪತಿಗೆ ನಿಧಿಯೊಂದು ಸಿಕ್ಕು ಬಿಡುತ್ತೆ. ಮತ್ತೋರ್ವ ಸೋದರ ಹೆಂಡತಿ ಆ ನಿಧಿಯತ್ತಲೂ ಕಣ್ಣು ಹಾಕುತ್ತಾಳೆ. ಇದರಿಂದ ರೋಸತ್ತ ಆ ದಂಪತಿ ಎಲ್ಲವನ್ನೂ ಬಿಟ್ಟು ದೇಶಾಂತರ ಹೊರಡುತ್ತಾರೆ.
Advertisement
Advertisement
ಹೀಗೆ ದೇಶಾಂತರ ಹೊರಟ ದಂಪತಿಯ ನಾಲ್ವರು ಗಂಡು ಮಕ್ಕಳೂ ದಿಕ್ಕಾಪಾಲಾಗುತ್ತಾರೆ. ಬೇರೆ ಬೇರೆ ಕಥೆಯಲ್ಲಿ ಕಳೆದು ಹೋದ ಆ ನಾಲ್ಕು ಪಾತ್ರಗಳಲ್ಲಿಯೂ ಶರಣ್ ಅವರೇ ನಟಿಸಿರೋದು ವಿಶೇಷ. ಆ ಬಳಿಕ ಈ ನಾಲ್ಕು ಪಾತ್ರಗಳನ್ನು ಒಂದು ಬಿಂದುವಿನಲ್ಲಿ ಸೇರಿಸುವಲ್ಲಿಯೂ ನಿರ್ದೇಶ ಸಂತು ಜಾಣ್ಮೆ ತೋರಿಸಿದ್ದಾರೆ. ಕಥೆಯ ಒಂದೆಳೆ ಕೇಳಿದರೇನೇ ಗೋಜಲಾಗಿದೆಯೇನೋ ಅನ್ನಿಸುತ್ತದಲ್ಲಾ? ಆದರೆ ಅಂಥಾ ಯಾವ ಗೊಂದಲವೂ ಇಲ್ಲದಂತೆ ವಿಕ್ಟರಿ ಸಲೀಸಾಗಿ ಮುಂದುವರೆಯುತ್ತೆ. ಕಥೆಯಾಚೆಗೂ ನಗಿಸೋದೇ ಇಡೀ ಚಿತ್ರದ ಮೂಲ ಉದ್ದೇಶ.
Advertisement
ಸಾಧು ಕೋಕಿಲಾ ನಟನೆಯೂ ಚೇತೋಹಾರಿಯಾಗಿದೆ. ಶರಣ್ ಕೂಡಾ ನಾಲ್ಕು ಪಾತ್ರಗಳಲ್ಲಿ ವಿಜೃಂಭಿಸಿದ್ದಾರೆ. ಸಂಭಾಷಣೆಗಳಂತೂ ಪ್ರತೀ ಕ್ಷಣವೂ ನಗೆಯುಕ್ಕಿಸುವಂತಿದೆ. ಹಿನ್ನೆಲೆ ಸಂಗೀತ, ಹಾಡುಗಳು ಒಂದಕ್ಕೊಂದು ಪೂರಕವಾಗಿ ವಿಕ್ಟರಿ 2 ಚಿತ್ರವನ್ನು ಪಕ್ಕಾ ಮನರಂಜನಾ ಪ್ಯಾಕೇಜ್ ಆಗಿ ಕಟ್ಟಿ ಕೊಟ್ಟಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv