ಅಹಮದಾಬಾದ್: ಭಾರತ (Team India) ಮತ್ತು ನ್ಯೂಜಿಲೆಂಡ್ (New Zealand) ನಡುವೆ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ (T20 Final Match) ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಆಡುತ್ತಾರೋ? ಇಲ್ವೋ ಎನ್ನುವುದು ಈಗ ದೊಡ್ಡ ಚರ್ಚೆಯ ವಿಷಯ.
ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (Abhishek Sharma) ಕಳಪೆ ಪ್ರದರ್ಶನ ನೀಡುತ್ತಿರುವುದು ತಂಡಕ್ಕೆ ದೊಡ್ಡ ಸಮಸ್ಯೆಯಾಗಿದೆ. ಹೀಗಾಗಿ ಫೈನಲ್ ಪಂದ್ಯಕ್ಕೆ ಟೀಂ ಇಂಡಿಯಾ ಅಭಿಷೇಕ್ ಶರ್ಮಾ ಜಾಗಕ್ಕೆ ರಿಂಕು ಸಿಂಗ್ (Rinku Singh) ಅವರನ್ನು ಆಡಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.
ಒಟ್ಟು ಆಡಿರುವ 7 ಪಂದ್ಯಗಳಲ್ಲಿ ಕೇವಲ 89 ರನ್ ಹೊಡೆದಿದ್ದಾರೆ. ಈ ಪೈಕಿ ಅಮೆರಿಕ, ಪಾಕಿಸ್ತಾನ, ನೆದರ್‌ಲ್ಯಾಂಡ್ಸ್ ವಿರುದ್ಧ ಸೊನ್ನೆಗೆ ಔಟಾದರೆ ದಕ್ಷಿಣ ಆಫ್ರಿಕಾ ವಿರುದ್ಧ 15 ರನ್, ವೆಸ್ಟ್ ಇಂಡೀಸ್ ವಿರುದ್ಧ 10 ರನ್, ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 9 ರನ್ ಗಳಿಸಿ ಔಟಾಗಿದ್ದಾರೆ. ಇದನ್ನೂ ಓದಿ: ಟಿ20 ವಿಶ್ವಕಪ್ ಫೈನಲ್ – ಅಹಮದಾಬಾದ್ ಪಿಚ್ ಹೇಗಿದೆ?

ಜಿಂಬಾಬ್ವೆ ವಿರುದ್ಧ 30 ಎಸೆತಗಳಲ್ಲಿ 55 ರನ್ ಹೊಡೆದಿದ್ದೇ ಈ ಟೂರ್ನಿಯ ಅತ್ಯುತ್ತಮ ಸಾಧನೆ. ಹೀಗಾಗಿ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಸೂರ್ಯ ಕುಮಾರ್ ಯಾದವ್ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವುದೇ ಸದ್ಯದ ಕುತೂಹಲ.
ಐಸಿಸಿ ಟಿ20 ಬ್ಯಾಟಿಂಗ್ ಶ್ರೇಯಾಂಕ ಪಟ್ಟಿಯಲ್ಲಿ 874 ರೇಟಿಂಗ್ ಪಡೆದ ಅಭಿಷೇಕ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಇದು ಟಿ20 ವಿಶ್ವಕಪ್ ಪಂದ್ಯ ನಡೆಯುವ ಮೊದಲು ಪ್ರಕಟವಾಗಿರುವ ಪಟ್ಟಿಯಾಗಿದ್ದು ಇಶನ್ ಕಿಶನ್ ಮೂರನೇ ಸ್ಥಾನದಲ್ಲಿದ್ದಾರೆ.
ಅಭಿಷೇಕ್ ಮತ್ತು ಇಶನ್ ಕಿಶನ್ ಅವರಿಂದ ಉತ್ತಮ ಜೊತೆಯಾಟ ಬಂದಿಲ್ಲ. ಹೀಗಾಗಿ ಇಶನ್ ಕಿಶನ್ ಜಾಗದಲ್ಲಿ ಈಗ ಸಂಜು ಸ್ಯಾಮ್ಸನ್ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ. ಸಂಜು ಸ್ಯಾಮ್ಸನ್ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ವಿರುದ್ಧ ಸ್ಫೋಟಕ ಅರ್ಧಶತಕ ಸಿಡಿಸಿ ಸತತ ಎರಡು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದಾರೆ.
ರಿಂಕು ಸಿಂಗ್ ಅವರನ್ನುಆಡಿಸುವುದು ಅನುಮಾನ ಎನ್ನಲಾಗುತ್ತಿದೆ. ಆದರೆ ಅಭಿಷೇಕ್ ಶರ್ಮಾ ಜಾಗದಲ್ಲಿ ಇಶನ್ ಕಿಶನ್ ಬರುವ ಸಾಧ್ಯತೆಯಿದೆ. ಎರಡನೇಯವರಾಗಿ ಅಭಿಷೇಕ್ ಬ್ಯಾಟಿಂಗ್ ಬರಬಹುದು ಎನ್ನಲಾಗುತ್ತಿದೆ. ತಂಡದಲ್ಲಿ ಬದಲಾವಣೆ ಆಗುತ್ತಾ? ಇಲ್ವೋ ಎಂಬ ಪ್ರಶ್ನೆಗೆ ಸಂಜೆ ಉತ್ತರ ಸಿಗಲಿದೆ.

