– ಜಿಂಬಾಬ್ವೆಗೆ 235 ರನ್‌ಗಳ ಗುರಿ ನೀಡಿದ ಭಾರತ
ಹರಾರೆ: ಟೀಂ ಇಂಡಿಯಾದ ಯುವ ಬ್ಯಾಟರ್ ಅಭಿಷೇಕ್ ಶರ್ಮಾ (Abhishek Sharma) ತಮ್ಮ ಮೊದಲ ಅಂತಾರಾಷ್ಟ್ರೀಯ ಟಿ20 ಸರಣಿಯಲ್ಲೇ ಚೊಚ್ಚಲ ಶತಕ ಸಿಡಿಸಿ ಮಿಂಚಿದ್ದಾರೆ. ಜಿಂಬಾಬ್ವೆ ವಿರುದ್ಧ ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿ ಭಾರೀ ಟೀಕೆಗೆ ಗುರಿಯಾಗಿದ್ದ ಅಭಿ, ಟೀಕಾಕಾರರಿಗೆ ಬ್ಯಾಟ್ ಮೂಲಕವೇ ಉತ್ತರ ಕೊಟ್ಟಿದ್ದಾರೆ.
ಇಲ್ಲಿನ ಹರಾರೆ ಸ್ಫೋರ್ಟ್ ಕ್ಲಬ್ ಮೈದಾನದಲ್ಲಿ ಜಿಂಬಾಬ್ವೆ (Zimbabwe) ವಿರುದ್ಧ ನಡೆಯುತ್ತಿರುವ 2ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) 10 ರನ್‌ಗಳಿಗೆ ಮೊದಲ ವಿಕೆಟ್ ಕಳೆದುಕೊಂಡರೂ ಬಳಿಕ ಅಭಿಷೇಕ್ ಶರ್ಮಾ ಅವರ ಸ್ಪೋಟಕ ಶತಕ ಹಾಗೂ ರುತುರಾಜ್ ಗಾಯಕ್ವಾಡ್ ಅವರ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 234 ರನ್ ಸಿಡಿಸಿದೆ.
ಚೊಚ್ಚಲ ಸರಣಿಯಲ್ಲೇ ಬೆಂಕಿ ಶತಕ:
ಐಪಿಎಲ್ ಬಳಿಕ ಚೊಚ್ಚಲ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನಾಡುತ್ತಿರುವ ಪಂಜಾಬ್ ಮೂಲದ ಅಭಿಷೇಕ್ ಶರ್ಮಾ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಮೊದಲ 33 ಎಸೆತಗಳಲ್ಲಿ 50 ರನ್ ಬಾರಿಸಿದ್ದ ಅಭಿ, ಮುಂದಿನ 13 ಎಸೆತಗಳಲ್ಲಿ 50 ರನ್ ಚಚ್ಚಿ ಶತಕ ಪೂರೈಸಿದ್ದಾರೆ. ಇದರಲ್ಲಿ 8 ಸಿಕ್ಸರ್, 7 ಬೌಂಡರಿಗಳೂ ಸೇರಿವೆ.
ಶತಕ ವೀರರ ಎಲೈಟ್ ಪಟ್ಟಿಗೆ ಅಭಿ:
ಚೊಚ್ಚಲ ಅಂತಾರಾಷ್ಟ್ರೀಯ ಸರಣಿಯಲ್ಲೇ ಸ್ಫೋಟಕ ಶತಕ ಸಿಡಿಸಿದ ಅಭಿಷೇಕ್ ಶರ್ಮಾ ಕಡಿಮೆ ಎಸೆತಗಳಲ್ಲಿ ಶತಕ ಪೂರೈಸಿದ ದಿಗ್ಗರ ಎಲೈಟ್ ಪಟ್ಟಿ ಸೇರಿದ್ದಾರೆ. ಆರನ್ ಫಿಂಚ್, ಕ್ರಿಸ್‌ಗೇಲ್, ಕೊಲಿನ್ ಮನ್ರೋ, ರವೀಂದರ್‌ಪಾಲ್ ಸಿಂಗ್, ಜೋಶ್ ಇಂಗ್ಲಿಸ್, ಗ್ಲೆನ್ ಮ್ಯಾಕ್ಸ್‌ವೆಲ್ ಈವರೆಗೆ 47 ಎಸೆತಗಳಲ್ಲಿ ಶತಕ ಸಿಡಿಸಿದ ಆಟಗಾರರಾಗಿದ್ದರು. ಇದೀಗ ಈ ದಿಗ್ಗಜರ ಪಟ್ಟಿಗೆ ಅಭಿಷೇಕ್ ಶರ್ಮಾ ಸೇರ್ಪಡೆಗೊಂಡಿದ್ದಾರೆ.
ಜಿಂಬಾಬ್ವೆಗೆ 235 ರನ್ ಗುರಿ:
ಜಿಂಬಾಬ್ವೆ ವಿರುದ್ಧ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ 20 ಓವರ್‌ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ 234 ರನ್ ಬಾರಿಸಿದ್ದು, ಎದುರಾಳಿ ಜಿಂಬಾಬ್ವೆಗೆ 235 ರನ್‌ಗಳ ಗುರಿ ನೀಡಿದೆ.
ಮಿಂಚಿದ ರಿಂಕು, ರುತು:
ಇತ್ತ ಅಭಿಷೇಕ್ ಶರ್ಮಾ ಶತಕ ಸಿಡಿಸಿ ಪೆವಿಲಿಯನ್ ಹಾದಿ ಹಿಡಿಯುತ್ತಿದ್ದಂತೆ ಜೊತೆಗೂಡಿದ ರುತುರಾಜ್ ಗಾಯಕ್ವಾಡ್, ರಿಂಕು ಸಿಂಗ್ ಜೋಡಿ ಬ್ಯಾಟಿಂಗ್ ಅಬ್ಬರ ಮುಂದುವರಿಸಿತು. ಮುರಿಯದ 3ನೇ ವಿಕೆಟ್‌ಗೆ ಈ ಜೋಡಿ 36 ಎಸೆತಗಳಲ್ಲಿ 87 ರನ್ ಚಚ್ಚಿತು. ಇದರಿಂದ ಭಾರತ 200 ರನ್‌ಗಳ ಗಡಿ ದಾಟುವಲ್ಲಿ ಯಶಸ್ವಿಯಾಯಿತು. ರುತುರಾಜ್ 47 ಎಸೆತಗಳಲ್ಲಿ 77 ರನ್ (1 ಸಿಕ್ಸರ್, 11 ಬೌಂಡರಿ) ಚಚ್ಚಿದರೆ, ರಿಂಕು ಸಿಂಗ್ ಸ್ಫೋಟಕ 48 ರನ್ (22 ಎಸೆತ, 5 ಸಿಕ್ಸರ್, 2 ಬೌಂಡರಿ) ಬಾರಿಸಿ ಅಜೇಯರಾಗುಳಿದರು. ನಾಯಕ ಶುಭಮನ್ ಗಿಲ್ 2 ರನ್ ಗಳಿಸಿದರು.