ಒಬ್ಬ ನಟ ಅಭಿನಯದ ಮೇಲೆ ಮಾತ್ರ ಗಮನಹರಿಸಬೇಕು. ಆದರೆ ನಿರ್ದೇಶಕನಾದವನು ಎಲ್ಲಾ ಜವಾಬ್ದಾರಿಯನ್ನು ತಮ್ಮ ಹೆಗಲಿಗೇರಿಸಿಕೊಂಡು ಸಾಗಬೇಕು. ಹಾಗೆ ನೋಡಿದರೆ ಏಕಕಾಲಕ್ಕೆ ನಟನೆ ಹಾಗೂ ನಿರ್ದೇಶನ ಮಾಡುವುದು ಸುಲಭದ ಮಾತಲ್ಲ. ಅಂಥಹ ಪ್ರಯತ್ನದಲ್ಲಿ ಗೆದ್ದವರು ಕೆಲವೊಂದಿಷ್ಟು ಮಂದಿ. ಆ ಸಾಲಿನಲ್ಲಿ ಯುವ ನಿರ್ದೇಶಕ ಅಭಿಷೇಕ್ ಶೆಟ್ಟಿ ಸ್ಥಾನ ಪಡೆದಿದ್ದಾರೆ.
ಅಭಿಷೇಕ್ ಶೆಟ್ಟಿ ನಟನೆ ಜೊತೆಗೆ ನಿರ್ದೇಶಕನಾಗಿಯೂ ಗುರುತಿಸಿಕೊಂಡಿದ್ದಾರೆ. ನಮ್ ಗಣಿ ಬಿ.ಕಾಂ ಪಾಸ್ ಚಿತ್ರದ ಮೂಲಕ ನಟನಾಗಿ ಹಾಗೂ ನಿರ್ದೇಶಕರಾಗಿ ಸ್ಯಾಂಡಲ್‌ವುಡ್‌ಗೆ ಹೆಜ್ಜೆ ಇಟ್ಟವರು. ಇದೀಗ ಅಭಿಷೇಕ್ ಇದೇ ಚಿತ್ರದ ಸೀಕ್ವೆಲ್ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.
ನಮ್ ಗಣಿ ಬಿ.ಕಾಂ ಪಾಸ್-2 ಸಿನಿಮಾದ ಮೊದಲ ಹಾಡು ಅನಾವರಣಗೊಂಡಿದೆ. ಅಭಿಷೇಕ್ ಶೆಟ್ಟಿ ಫಿಲಂಸ್ ಯೂಟ್ಯೂಬ್ ನಲ್ಲಿ ನನ್ನ ಜೀವ ನೀನು ಎಂಬ ಮೆಲೋಡಿ ಹಾಡು ರಿಲೀಸ್ ಆಗಿದೆ. ಪ್ರಮೋದ್ ಮರವಂತೆ ಸಾಹಿತ್ಯ ಬರೆದು ಈ ಗೀತೆಗೆ ಚೇತನ್ ಗಂಧರ್ವ ಹಾಗೂ ಹರ್ಷಿಕಾ ದೇವನಾಥ್ ಧ್ವನಿ ಕುಣಿಸಿದ್ದಾರೆ. ಆನಂದ್ ರಾಜವಿಕ್ರಂ ಸಂಗೀತ ಒದಗಿಸಿರುವ ಹಾಡಿನಲ್ಲಿ ಅಭಿಷೇಕ್ ಶೆಟ್ಟಿ ಹಾಗೂ ಹೃತಿಕಾ ಶ್ರೀನಿವಾಸ್ ಮಿಂಚಿದ್ದಾರೆ.
ಬಿ ಎಸ್ ಪ್ರಶಾಂತ್ ಶೆಟ್ಟಿ ಹಾಗೂ ಪ್ರಶಾಂತ್ ರೆಡ್ಡಿ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಸುಮಂತ್ ಆಚಾರ್ಯ ಕ್ಯಾಮೆರಾ ಹಿಡಿಯುತ್ತಿದ್ದಾರೆ. ವಿಜೇತ್ ಚಂದ್ರ ಸಂಕಲನ, ಆನಂದ್ ರಾಜವಿಕ್ರಂ ಟ್ಯೂನ್ ಹಾಕುತ್ತಿದ್ದಾರೆ. ಮುಂದಿನ ವರ್ಷ ಫೆಬ್ರವರಿ 12ಕ್ಕೆ ನಮ್ ಗಣಿ ಬಿಕಾಂ ಪಾಸ್ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.


