ಬೆಂಗಳೂರು: ಅಭಿಷೇಕ್ ಅಂಬರೀಶ್ ರಾಜಕೀಯಕ್ಕೆ ಪ್ರವೇಶಿಸುತ್ತಾರೆ ಎಂಬ ಊಹಾಪೋಹಗಳಿಗೆ ಸುಮಲತಾ ಅಂಬರೀಶ್ ಅವರು ಸ್ಪಷ್ಟನೆ ನೀಡಿದ್ದು, ಅಭಿಷೇಕ್ ಹೆಸರನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂದು ತಿಳಿಸಿದ್ದಾರೆ.
ಅಂಬರೀಶ್ ಅವರ 9ನೇ ತಿಂಗಳ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಸಮಾಧಿಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮದ್ದೂರಲ್ಲಿ ಅಭಿಷೇಕ್ ಚುನಾವಣೆಗೆ ಸ್ಪರ್ಧಿಸುತ್ತಾರೆ ಎಂದು ಚರ್ಚೆ ನಡೆಯುತ್ತಿರುವುದರ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದು, ಅಭಿ ಹೆಸರು ರಾಜಕಾರಣಕ್ಕೆ ದಯವಿಟ್ಟು ತರಬೇಡಿ. ಅವನು ಇನ್ನೂ ಸಿನಿಮಾ ಮಾಡಬೇಕು. ಅದಕೆ ಸಮಯವಿದೆ. ಸದ್ಯಕ್ಕೆ ಅವನು ರಾಜಕೀಯ ಪ್ರವೇಶಿಸುವ ಸನ್ನಿವೇಶ ಇಲ್ಲ. ಆತನೇ ಈ ಕುರಿತು ನಿರ್ಧರಿಸಿದರೆ ಮುಂದೆ ನೋಡೋಣ. ಅಲ್ಲಿಯವರೆಗೂ ಅತನನ್ನು ರಾಜಕೀಯಕ್ಕೆ ಎಳೆದು ತರಬೇಡಿ ಎಂದು ತಿಳಿಸಿದರು.
ಫೋನ್ ಟ್ಯಾಪಿಂಗ್ ಕುರಿತು ಮಾತನಾಡಿದ ಅವರು, ಫೋನ್ ಟ್ಯಾಪಿಂಗ್ ಕುರಿತು ನಾನು ತನಿಖೆಗೆ ಒತ್ತಾಯ ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಫೋನ್ ಟ್ಯಾಪಿಂಗ್ ಆಗುತ್ತಿದ್ದ ಅನುಮಾನವಿತ್ತು. ಈಗ ಅದು ಬೆಳಕಿಗೆ ಬಂದಿದೆ. ಸಿಬಿಐ ತನಿಖೆಗೆ ವಹಿಸಿದ್ದಾರೆ, ಏನಾಗುತ್ತದೆಯೋ ಕಾದು ನೋಡೋಣ ಎಂದು ಹೇಳಿದರು.
ಅಂಬರೀಶ್ ಅವರ ಅವರ 9ನೇ ತಿಂಗಳ ತಿಥಿ ಹಿನ್ನೆಲೆ ಕಂಠೀರವ ಸ್ಟುಡಿಯೋದಲ್ಲಿ ಇರುವ ಅಂಬರೀಶ್ ಸಮಾಧಿಗೆ ಸುಮಲತಾ ಪೂಜೆ ಸಲ್ಲಿಸಿದರು. ಅಂಬರೀಶ್ ಕುಟುಂಬಸ್ಥರು ಭಾಗಿಯಾಗಿದ್ದರು. ಪುತ್ರ ಅಭಿಷೇಕ್, ನಿರ್ಮಾಪಕ ರಾಕ್‍ಲೈನ್ ವೆಂಕಟೇಶ್ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.