ಬೆಂಗಳೂರು: ಶಂಕರಪುರದ ಶಂಕರಮಠದ ಆವರಣದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ (Akhila Karnataka Brahmin Mahasabha) ಜ 6 ಮತ್ತು 7 ರಂದು ಆಯೋಜಿಸಿರುವ ಅಭಿಜಾತೆ-2024-ರಾಜ್ಯ ಮಟ್ಟದ ಮಹಿಳಾ ಸಮಾವೇಶವನ್ನು (Women’s Conference) ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಉದ್ಘಾಟಿಸಲಿದ್ದಾರೆ.
ಸಮಾವೇಶದಲ್ಲಿ ಹಲವು ಸಾಂಸ್ಕೃತಿಕ-ಕಲಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಅದಮ್ಯಚೇತನ ಮುಖ್ಯಸ್ಥರಾದ ತೇಜಸ್ವಿನಿ ಅನಂತ್ ಕುಮಾರ್, ಎಕೆಬಿಎಂಎಸ್ ಕಾರ್ಯಾಧ್ಯಕ್ಷರಾದ ಮೇದಿನಿ ಉದಯ್ ಗರುಡಾಚಾರ್, ರಾಜಮಾತೆ ಪ್ರಮೋದಾ ದೇವಿ ಒಡೆಯರ್, ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿಗಳಾದ ಭೀಮೇಶ್ವರ್ ಜೋಷಿ, ಶಿಕ್ಷಣ ತಜ್ಞ ಗುರುರಾಜ ಕರ್ಜಗಿ ಸೇರಿದಂತೆ ಅನೇಕ ಗಣ್ಯರು ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಹರಿಪ್ರಸಾದ್‌ರನ್ನು ಕೂಡಲೇ ಬಂಧಿಸಬೇಕು: ಡಿವಿಎಸ್ ಆಗ್ರಹ
ಧರ್ಮ- ಸಂಸ್ಕೃತಿ ಮಹಿಳೆ, ಮಾಧ್ಯಮದಲ್ಲಿ ಮಹಿಳೆಯರ ಪಾತ್ರ, ಮಹಿಳಾ ಸಬಲೀಕರಣ ಹಾಗೂ ಕೌಶಲ್ಯಾಭಿವೃದ್ಧಿ, ಕನ್ನಡ ಸಾಹಿತ್ಯ ಮತ್ತು ಮಹಿಳೆ ಸೇರಿದಂತೆ ಸಮಾವೇಶದಲ್ಲಿ ಹಲವು ವಿಚಾರ ಗೋಷ್ಠಿಗಳಿರಲಿವೆ. ಬಹುಶ್ರುತ ವಿದ್ವಾಂಸರಾದ ಶತಾವಧಾನಿ ಗಣೇಶ್, ಅಲ್ಕಾ ಸುಧೀರ್ ಇನಾಮದಾರ ಧರ್ಮ- ಸಂಸ್ಕೃತಿ ಮಹಿಳೆ ವಿಷಯವಾಗಿ ವಿಚಾರ ಮಂಡನೆ ಮಾಡಲಿದ್ದಾರೆ.
ಜ.06 ರಂದು ಶ್ರೀರಾಮದರ್ಶನ’ದೊಂದಿಗೆ ನೃತ್ಯರೂಪಕ-ಕಥಕ್, ವಿದ್ವಾನ್ ಆನೂರು ಅನಂತಕೃಷ್ಣ ಶರ್ಮ ನಿರ್ದೇಶನದಲ್ಲಿ ಲಯ-ಲಾವಣ್ಯ-ತಾಳವಾದ್ಯ ಸೇರಿದಂತೆ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಸಾಧಕ ಮಹಿಳೆಯರನ್ನು ಗಣ್ಯರ ಉಪಸ್ಥಿತಿಯಲ್ಲಿ ಪುರಸ್ಕರಿಸಲಾಗುತ್ತದೆ.
ಎಕೆಬಿಎಂಎಸ್ ಅಧ್ಯಕ್ಷ ಅಶೋಕ್ ಹಾರನಹಳ್ಳಿ (Ashok Haranahalli) ಹಾಗೂ ಮಹಾಸಭಾದ ರಾಜ್ಯ ಮಹಿಳಾ ವಿಭಾಗದ ಸಂಚಾಲಕಿ ಶುಭಮಂಗಳ ಅವರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಅಭಿಜಾತೆ-2024ದಲ್ಲಿ ಮಹಿಳೆಯರು ತಯಾರಿಸಿರುವ ಕರಕುಶಲ ವಸ್ತುಗಳ ಪ್ರದರ್ಶನ, ಮಾರಾಟ ಮಳಿಗೆಗಳು ಆಕರ್ಷಣೆಯ ಕೇಂದ್ರಬಿಂದುವಾಗಿರಲಿದೆ.
ಜ.06 ರಂದು ರಾಜ್ಯ ಮಟ್ಟದ ಭಜನಾ ಸ್ಪರ್ಧೆ ನಡೆಯಲಿದ್ದು, ಜ.07 ರಂದು ಬಸವನಗುಡಿಯ ದೊಡ್ಡಗಣಪತಿ ದೇವಾಲಯದಿಂದ ಸಮ್ಮೇಳನದ ಆವರಣದವರೆಗೆ ಜಾನಪದ ಕಲಾ ತಂಡಗಳ ಕಲಾಪ್ರದರ್ಶನದೊಂದಿಗೆ ನಡೆಯುವ ಶೋಭಾಯಾತ್ರೆಯನ್ನು, ಅದಮ್ಯಚೇತನ ಮುಖ್ಯಸ್ಥರಾದ ತೇಜಸ್ವಿನಿ ಅನಂತ್ ಕುಮಾರ್, ಎಕೆಬಿಎಂಎಸ್ ಕಾರ್ಯಾಧ್ಯಕ್ಷರಾದ ಮೇದಿನಿ ಉದಯ್ ಗರುಡಾಚಾರ್ ಉದ್ಘಾಟಿಸಲಿದ್ದಾರೆ. 16 ವರ್ಷಗಳ ನಂತರ ಸಮುದಾಯದ ಮಹಿಳಾ ವಿಭಾಗದ ಬೃಹತ್ ಸಮಾವೇಶ ಆಯೋಜನೆಗೊಂಡಿದೆ.