– ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ ಸಚಿವ ದಿನೇಶ್ ಗುಂಡೂರಾವ್
ಮಂಗಳೂರು: ಬಂಟ್ವಾಳದ ಅಬ್ದುಲ್ ರಹಿಮಾನ್ ಹತ್ಯೆ ವಿಚಾರದಲ್ಲಿ ಸರ್ಕಾರದ ವಿರುದ್ಧ ಮುಸ್ಲಿಮರ ಆಕ್ರೋಶ ಮತ್ತೆ ಸ್ಫೋಟಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವರ ಪತ್ರಿಕಾಗೋಷ್ಠಿಯ ಮಧ್ಯದಲ್ಲೇ ಮುಸ್ಲಿಂ ಮುಖಂಡನೋರ್ವ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ಸಚಿವರ ಜೊತೆ ಮುಸ್ಲಿಂ ಮುಖಂಡರು ಸಭೆ ನಡೆಸಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕ್ರಮಕೈಗೊಳ್ಳಲು ಒತ್ತಾಯಿಸಿದ್ದಾರೆ. ಪೊಲೀಸ್ ಅಧಿಕಾರಿಗಳ ಜೊತೆಯೂ ಸಚಿವರು ಸಭೆ ನಡೆಸಿದ್ದಾರೆ.
ಅಬ್ದುಲ್ ರಹಿಮಾನ್ ಹತ್ಯೆಯ ಬಳಿಕ ಮುಸ್ಲಿಂ ಸಮುದಾಯ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಸರ್ಕಾರ ಹಾಗೂ ಪೊಲೀಸ್ ಇಲಾಖೆಯ ನಿರ್ಲಕ್ಷ್ಯದಿಂದಲೇ ರಹಿಮಾನ್ ಹತ್ಯೆ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜಿಲ್ಲೆಯಲ್ಲಿ ಹಿಂದೂ ಮುಖಂಡರು ಉದ್ರೇಕಕಾರಿ ಕೋಮು ದ್ವೇಷದ ಭಾಷಣ ಮಾಡಿದ್ರೂ ಅವರನ್ನು ಬಂಧಿಸದೆ ಕೇವಲ ಪ್ರಕರಣ ದಾಖಲಿಸಿದ್ದರಿಂದ ರಹಿಮಾನ್ ಹತ್ಯೆ ಆಗಿದೆ ಎಂದು ದೂರಿದ್ದಾರೆ.
ಹತ್ಯೆ ಬೆನ್ನಲ್ಲೇ ಕಳೆದ ಎರಡು ದಿನದ ಹಿಂದೆ ಕಾಂಗ್ರೆಸ್‌ನಲ್ಲಿರುವ ಮುಸ್ಲಿಮರು ತಮ್ಮ ಸ್ಥಾನಗಳಿಗೆ ರಾಜೀನಾಮೆಯನ್ನೂ ನೀಡಿದ್ದರು. ಇಂದು ಜಿಲ್ಲೆಗೆ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಭೇಟಿ ನೀಡಿದರೂ ಕಾಂಗ್ರೆಸ್‌ನ ಮುಸ್ಲಿಂ ಮುಖಂಡರು ಸಚಿವರ ಜೊತೆ ಕಾಣಿಸಿಕೊಂಡಿಲ್ಲ. ಈ ನಡುವೆ ಸಚಿವ ದಿನೇಶ್ ಗುಂಡೂರಾವ್ ಸರ್ಕ್ಯೂಟ್ ಹೌಸ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸುತ್ತಿದ್ದ ವೇಳೆ ನಡುವೆ ಬಂದ ಉಳ್ಳಾಲ ನಗರ ಸಭೆಯ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು, ಸಚಿವರು ಹಾಗೂ ಸರ್ಕಾರದ ವಿರುದ್ಧ ಮಾತನಾಡಿದರು. ಈ ವೇಳೆ ಸಚಿವರು ಗರಂ ಆಗಿ ಆತನನ್ನು ಹೊರಹಾಕಿ ಎಂದರು.
ಪತ್ರಿಕಾಗೋಷ್ಠಿ ಮುಗಿಸಿ ಹೊರಬರುತ್ತಿದ್ದಂತೆ ಮತ್ತೆ ಉಸ್ಮಾನ್ ಕಲ್ಲಾಪು ಆಕ್ರೋಶ ವ್ಯಕ್ತಪಡಿಸಿದ್ದು, ಅಲ್ಲೇ ಇದ್ದ ಕೆಲ ಮುಸ್ಲಿಮರು ಆತನನ್ನು ಸಮಾಧಾನಪಡಿಸಿದರು. ಆಕ್ರೋಶ ಹೆಚ್ಚಾಗುತ್ತಿದ್ದಂತೆ ಸಚಿವರು ಅಲ್ಲಿಂದ ತೆರಳಿದರು. ಬಳಿಕ ಮಾತನಾಡಿದ ಉಸ್ಮಾನ್ ಕಲ್ಲಾಪು, ಉದ್ರೇಕಕಾರಿ ಭಾಷಣ ಮಾಡೋರನ್ನ ಬಂಧಿಸದೇ ಕೇವಲ ಪ್ರಕರಣ ದಾಖಲಿಸಿ ಬಿಟ್ಟಿರೋದರಿಂದ ಈ ಹತ್ಯೆ ನಡೆದಿದೆ. ಪೊಲೀಸರಿಗೆ ಆದೇಶ ಕೊಡಿ. ತಪ್ಪು ಮಾಡಿದವರನ್ನ ಬಂಧಿಸಿ. ನಮಗೆ ಸಪೋರ್ಟ್ ಮಾಡೋದು ಬೇಡ. ನ್ಯಾಯ ಕೊಡಲಿ ನಾವೂ ಕಾಂಗ್ರೆಸ್ಸಿಗರೇ ಎಂದು ಟೀಕಿಸಿದ್ದಾರೆ.
ಉಸ್ತುವಾರಿ ಸಚಿವರನ್ನ ಕೆಲ ಮುಸ್ಲಿಂ ಮುಖಂಡರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ಭೇಟಿ ಮಾಡಿ ಜಿಲ್ಲೆಯ ಶಾಂತಿ ಸುವ್ಯವಸ್ಥೆ ಬಗ್ಗೆ ಸಭೆ ನಡೆಸಿದರು. ಐದು ನಿಮಿಷಗಳ ಕಾಲ ಸಭೆ ನಡೆಸಿ ಮುಸ್ಲಿಂ ಮುಖಂಡರ ಅವಹಾಲು ಸ್ವೀಕರಿಸಿದರು. ಜಿಲ್ಲೆಯ ಶಾಂತಿ ಸುವ್ಯವಸ್ಥೆ ಹಾಳು ಮಾಡುವ ಯಾವುದೇ ಧರ್ಮ, ಪಕ್ಷದವರಿದ್ದರೂ ಅವರ ವಿರುದ್ಧ ಕ್ರಮಕೈಗೊಳ್ಳಿ. ಇಲ್ಲಿಯ ಕೋಮುಗಲಭೆಯಿಂದ ಬೇರೆಯವರು ಲಾಭ ಪಡೆಯುತ್ತಿದ್ದಾರೆ. ಇದನ್ನ ತಡೆಗಟ್ಟುವಲ್ಲಿ ಕ್ರಮಕೈಗೊಳ್ಳಲು ಮುಸ್ಲಿಂ ಮುಖಂಡರ ಸಚಿವರನ್ನ ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ನಡೆದ ಕೆಲ ಅಹಿತಕರ ಘಟನೆಯ ಹಿನ್ನೆಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಹಾಗೂ ಜಿಲ್ಲಾ ಎಸ್‌ಪಿಯವರನ್ನ ಸರ್ಕಾರ ವರ್ಗಾವಣೆ ಮಾಡಿದ್ದು, ನೂತನ ಕಮಿಷನರ್ ಆಗಿ ಬಂದಿರುವ ಸುಧೀರ್ ಕುಮಾರ್ ರೆಡ್ಡಿ, ದಕ್ಷಿಣ ಕನ್ನಡ ಎಸ್‌ಪಿ ಡಾ. ಅರುಣ್ ಹಾಗೂ ಇತರೆ ಅಧಿಕಾರಿಗಳ ಜೊತೆ ಸಚಿವರು ಸಭೆ ನಡೆಸಿದರು. ಜಿಲ್ಲೆಯಲ್ಲಿ ಮುಂದೆ ಕಾನೂನು ಸುವ್ಯವಸ್ಥೆ ಹದಗೆಡದಂತೆ ಕ್ರಮಕೈಗೊಳ್ಳಲು ಸೂಚನೆ ನೀಡಿಲಾಯಿತು.