– ಸುಹಾಸ್ ಶೆಟ್ಟಿ ಹತ್ಯೆಯ ಬಳಿಕ ಮತ್ತೊಂದು ಕೊಲೆ
– ಮೇ 30ರವರೆಗೆ ನಿಷೇಧಾಜ್ಞೆ ಜಾರಿ
ಮಂಗಳೂರು: ಕರಾವಳಿಯಲ್ಲಿ ಮತ್ತೆ ನೆತ್ತರು ಹರಿದಿದೆ. ಬಂಟ್ವಾಳ ಸಮೀಪ ಮುಸ್ಲಿಂ (Muslim) ಯುವಕನನ್ನು ಬರ್ಬರವಾಗಿ ಮಾರಕಾಸ್ತ್ರದಿಂದ ಕೊಚ್ಚಿ ಕೊಲೆ (Murder) ಮಾಡಲಾಗಿದೆ. ಆರೋಪಿಗಳನ್ನು ಬಂಧಿಸುವಂತೆ ಮುಸ್ಲಿಮರು ಒತ್ತಾಯಿಸಿ ರಾತ್ರಿಯೇ ಪ್ರತಿಭಟನೆ ನಡೆಸಿದ್ದಾರೆ. ಇಂದಿನಿಂದ ಮೇ 30ರ ಸಂಜೆ 6ಗಂಟೆವರೆಗೂ ಮಂಗಳೂರು ಕಮೀಷನರೇಟ್ ಹಾಗು ಮಂಗಳೂರು (Mangaluru) ಪೊಲೀಸ್ ವ್ಯಾಪ್ತಿಯಡಿ ನಿಷೇಧಾಜ್ಞೆಯನ್ನು ಜಾರಿ ಮಾಡಲಾಗಿದ್ದು ಹೆಚ್ಚುವರಿ ಪೊಲೀಸರನ್ನು ಕರೆಸಲಾಗಿದೆ.
ಕೊಲೆಯಾಗಿದ್ದು ಹೇಗೆ?
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಗೆ ತಿಂಗಳು ಕಳೆಯುವ ಮೊದಲೇ ಮುಸ್ಲಿಂ ಯುವಕನ ಬರ್ಬರ ಹತ್ಯೆ ನಡೆದಿದೆ. ಮಂಗಳವಾರ ಮಧ್ಯಾಹ್ನ 3.30ರ ಸುಮಾರಿಗೆ ಬಂಟ್ವಾಳದ ಕೂರಿಯಾಳ ಸಮೀಪದ ಇರಾಕೋಡಿ ಎಂಬಲ್ಲಿ ಕೊಳತ್ತಮಜಲ್ ನಿವಾಸಿ ಅಬ್ದುಲ್ ರಹಿಮಾನ್ ಯಾನೆ ರಹೀಂ(34) ಅವರನ್ನು ಬರ್ಬರವಾಗಿ ಕೊಲೆ ಮಾಡಲಾಗಿದೆ.
ಪಿಕಪ್ ವಾಹನ ಹೊಂದಿರೋ ಅಬ್ದುಲ್ ರಹೀಂ (Abdul Rahim) ಬಳಿ ಒಂದು ಲೋಡ್ ಮರಳು ಬೇಕೆಂದು ದುಷ್ಕರ್ಮಿಗಳು ಕುರಿಯಾಳದ ಇರಾಕೋಡಿಗೆ ಕರೆಸಿಕೊಂಡಿದ್ದಾರೆ. ಮರಳು ಇಳಿಸಿದ ಕೆಲವೇ ಕ್ಷಣದಲ್ಲಿ ಅಲ್ಲೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಏಕಾಏಕಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ವಿಹೆಚ್ಪಿ ಮುಖಂಡ ಶರಣ್ ಪಂಪ್ವೆಲ್ ಬಂಧನ – ಜಾಮೀನು
ರಕ್ತದ ಮಡುವಿನಲ್ಲಿ ಬಿದ್ದಿದ್ದ ಅಬ್ದುಲ್ ರಹೀಂ ಅವರನ್ನು ತಕ್ಷಣ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದರೂ ಆ ವೇಳೆ ಮೃತಪಟ್ಟಿದ್ದಾರೆ. ರಹೀಂ ಜೊತೆಗಿದ್ದ ಕಲಂಧರ್ ಶಾಫಿ ಎಂಬವರಿಗೂ ಮಾರಕಾಸ್ತ್ರದಿಂದ ಹಲ್ಲೆ ನಡೆಸಿದ್ದು ಗಂಭೀರ ಗಾಯದೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಬಂಟ್ವಾಳ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಆರಂಭಿಸಲಾಗಿದೆ.
ರಾತ್ರಿ ಪ್ರತಿಭಟನೆ:
ರಹೀಂ ಹತ್ಯೆ ಸುದ್ದಿ ಹಬ್ಬುತ್ತಿದ್ದಂತೆ ದೇರಳಕಟ್ಟೆಯ ಯೆನಪೋಯ ಆಸ್ಪತ್ರೆಗೆ ನೂರಾರು ಸಂಖ್ಯೆಯಲ್ಲಿ ಜನ ಜಮಾಯಿಸಿದರು. ಸುಹಾಸ್ ಶೆಟ್ಟಿ ಹತ್ಯೆ ಬಳಿಕ ಹಿಂದೂ ಮುಖಂಡರ ಪ್ರಚೋದನಕಾರಿ ಹೇಳಿಕೆಯಿಂದಲೇ ಇದೀಗ ಅಮಾಯಕ ಮುಸ್ಲಿಂ ಯುವಕನ ಹತ್ಯೆಯಾಗಿದೆ ಎಂದು ಸೇರಿದ ಜನ ಆಕ್ರೋಶ ವ್ಯಕ್ತಪಡಿಸಿದರು. ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿ ಪೊಲೀಸರ ವಿರುದ್ಧ ಸಿಟ್ಟು ಹೊರಹಾಕಿದರು.
ಹತ್ಯೆಗೀಡಾದ ಅಬ್ದುಲ್ ರಹಿಮಾನ್ ಪಿಕಪ್ ವಾಹನದಲ್ಲಿ ಬಾಡಿಗೆ ಮಾಡಿ ಜೀವನ ಸಾಗಿಸುತ್ತಿದ್ದು ಸ್ಥಳೀಯ ಮಸೀದಿಯ ಕಾರ್ಯದರ್ಶಿಯಾಗಿದ್ದರು. ಮದುವೆಯಾಗಿ ಎರಡು ಮಕ್ಕಳು ಇರೋ ರಹೀಂ ಯಾವುದೇ ಕೃತ್ಯಗಳಲ್ಲೂ ಭಾಗಿಯಾಗಿಲ್ಲ, ಯಾವುದೇ ಸಂಘಟನೆಗಳಲ್ಲೂ ಗುರುತಿಸಿಕೊಂಡಿಲ್ಲ.ಅಮಾಯಕನಾಗಿರೋ ವ್ಯಕ್ತಿಯನ್ನ ಹತ್ಯೆ ಮಾಡಲಾಗಿದೆ, ಈ ಹತ್ಯೆ ಹಿಂದೆ ಇರೋ ಎಲ್ಲರನ್ನೂ ತಕ್ಷಣ ಬಂಧಿಸಬೇಕೆಂದು ಎಸ್ಡಿಪಿಐ ಜಿಲ್ಲಾಧ್ಯಕ್ಷ ಅನ್ವರ್ ಸಾದತ್ ಆಗ್ರಹಿಸಿದ್ದಾರೆ.
ಅಬ್ದುಲ್ ರಹಿಮಾನ್ ಹತ್ಯೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಅಲರ್ಟ್ ಆಗಿದ್ದು ಜಿಲ್ಲಾದ್ಯಂತ ಮೇ 30 ರವರೆಗೆ ನಿಷೇಧಾಜ್ಞೆ ಹಾಕಲಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹೊರ ಜಿಲ್ಲೆಯಿಂದ ಹೆಚ್ಚುವರಿ ಪೊಲೀಸರನ್ನು ತರಿಸಿಕೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಎಡಿಜಿಪಿ ಆರ್.ಹಿತೇಂದ್ರ ಇಂದು ಮಂಗಳೂರಿಗೆ ಭೇಟಿ ನೀಡಲಿದ್ದು ಭದ್ರತೆ ಪರಿಶೀಲಿಸಲಿದ್ದಾರೆ. ಮೃತ ಅಬ್ದುಲ್ ರಹಿಮಾನ್ ಅಂತ್ಯ ಸಂಸ್ಕಾರ ಇಂದು ಅವರ ಸ್ವಗ್ರಾಮ ಕೊಳ್ತಮಜಲ್ ನಲ್ಲಿ ನಡೆಯಲಿದೆ.