ಮಡಿಕೇರಿ: ಪ್ರವಾಸಿಗರ ಹಾಟ್ ಸ್ಪಾಟ್ ಹಸಿರನಾಡು ಕೊಡಗು ಈಗ ಮತ್ತಷ್ಟು ರಂಗೇರಿದೆ. ಹಸಿರ ಕಾಡಿನ ನಡುವೆ ಧುಮ್ಮಿಕ್ಕಿ ಹರಿಯುವ ಅಬ್ಬಿ ಜಲಪಾತ ಮಳೆಗೆ ಹಾಲ್ನೊರೆಯಂತೆ ಹರಿಯುತ್ತಾ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.
ಹೌದು. ಇದು ಟೂರಿಸ್ಟ್ ಗಳ ಸ್ವರ್ಗ ಹಸಿರನಾಡು ಕೊಡಗಿನ ಅಬ್ಬಿ ಜಲಪಾತದ ವೈಭವ ದೃಶ್ಯ ಕಾವ್ಯದ ವಿಹಂಗಮ ನೋಟ ಎಲ್ಲರ ಕಣ್ಮನ ಸೆಳೆಯುತ್ತಿದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಗೆ ಮೈದುಂಬಿರುವ ಅಬ್ಬಿ ಜಲಪಾತ ನೋಡಲು ಪ್ರವಾಸಿಗರ ದಂಡೇ ಈಗ ಹರಿದು ಬರುತ್ತಿದೆ.
Advertisement
ಮಳೆಯ ನಡುವೆಯೂ ಹೆಚ್ಚಿನಸಂಖ್ಯೆಯಲ್ಲಿ ಆಗಮಿಸುತ್ತಿರುವ ಪ್ರವಾಸಿಗರು ಈ ಹಸಿರನಾಡು ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುತ್ತಿದ್ದಾರೆ. ಕೈಕೆಟುಕುವಷ್ಟು ಹತ್ತಿದಲ್ಲಿ ಸಾಗುವ ಮೋಡಗಳೊಂದಿಗೆ ಚೆಲ್ಲಾಟವಾಡುತ್ತ ಚುಮು ಚುಮು ಚಳಿಯನ್ನ ಎಂಜಾಯ್ ಮಾಡುತ್ತಾರೆ. ಸಾಮಾನ್ಯವಾಗಿ ಬೇಸಿಗೆಯಲ್ಲಿ ನೀರಿಲ್ಲದೇ ಬಣಗುಡುವ ಅಬ್ಬಿಫಾಲ್ಸ್ ಮಳೆಗಾಲದಲ್ಲಿ ತನ್ನ ನೈಜ ಸೌಂದರ್ಯವನ್ನು ತೆರೆದುಕೊಂಡು ಪ್ರವಾಸಿಗರ ಹಾಟ್ ಸ್ಪಾಟ್ ಆಗಿ ಬದಲಾಗುತ್ತಿದೆ.
Advertisement
Advertisement
80 ಅಡಿ ಎತ್ತರದಿಂದ ಹಾಲ್ನೊರೆಯಂತೆ ಹರಿಯುವ ಜಲಪಾತವನ್ನು ನೋಡುತ್ತಾ ನಿಂತರೆ ಸ್ವರ್ಗವೇ ಧರೆಗೆ ಇಳಿದಂತೆ ಕಾಣುತ್ತಿದೆ. ರಾಜ್ಯದ ವಿವಿಧ ಭಾಗಗಳಿಂದ ಇಲ್ಲಿಗೆ ಬರುವ ಪ್ರವಾಸಿಗರು ತಮ್ಮ ಎಲ್ಲ ನೋವುಗಳನ್ನು ಮರೆತು ಪ್ರಕೃತಿಯ ಮಡಿಲಲ್ಲಿ ಮೈಮರೆಯುತ್ತಾರೆ. ಜಲಧಾರೆಯ ಮೋಹಕ ಸೆಳೆತ ಒಂದೆಡೆಯಾದರೆ, ಮಂಜಿನ ಸ್ಪರ್ಶ, ಮೈಗೆ ಸೋಕುವ ತಂಗಾಳಿ ಮನಸ್ಸಿಗೆ ಹಿತನೀಡುತ್ತೆ.
Advertisement
ಮಡಿಕೇರಿಯಿಂದ ಕೇವಲ 8 ಕಿ.ಮೀ. ದೂರದಲ್ಲಿರುವ ಅಬ್ಬಿ ಜಲಪಾತ ಮಳೆಗಾಲದಲ್ಲಿ ಹೆಚ್ಚು ಸುಂದರವಾಗಿ ಕಾಣುತ್ತೆ. ಅದಕ್ಕಾಗಿಯೇ ವೀಕೆಂಡ್ ಗಳಲ್ಲಿ ಜಲಪಾತನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಾರೆ. ಕಪ್ಪು ಕಲ್ಲುಗಳ ನಡುವೆ ಶ್ವೇತಧಾರೆಯಾಗಿ ಧರೆಗಿಳಿಯುವ ಜಲಪಾತದ ದೃಶ್ಯವನ್ನು ಸೆರೆಹಿಡಿಯುವ ಪ್ರವಾಸಿಗರು ತಮ್ಮ ಪ್ರವಾಸದ ನೆನಪನ್ನ ಹಸಿರಾಗಿಡಲು ಹಂಬಲಿಸುತ್ತಾರೆ. ಹಾಗಿದ್ದರೆ ತಡೆಯಾಕೆ ನೀವು ಒಮ್ಮೆ ಬನ್ನಿ ಹಸಿರನಾಡು ಕೊಡಗಿನ ಅಬ್ಬಿ ಜಲಪಾತದ ಸೊಬಗವನ್ನು ಕಣ್ತುಂಬಿಕೊಳ್ಳಿ.