ಮಡಿಕೇರಿ: ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯ ಅಬ್ಬರಕ್ಕೆ ಇತಿಹಾಸ ಪ್ರಸಿದ್ಧವಾದ ಅಬ್ಬಿ ಜಲಪಾತ ಬೋರ್ಗರೆಯುತ್ತಿದೆ. ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿರುವ ಈ ಜಲಧಾರೆಯ ಸೊಬಗನ್ನು ನೋಡುವುದೇ ಈಗ ಕಣ್ಣಿಗೆ ಹಬ್ಬವಾಗಿದೆ. ಸಾವಿರಾರು ಪ್ರವಾಸಿಗರು ಈ ಜಲಪಾತವನ್ನು ನೋಡಲು ಮುಗಿಬೀಳುತ್ತಿದ್ದಾರೆ.
ಮಡಿಕೇರಿಯಲ್ಲಿ ಮಳೆ ಆರಂಭವಾಯಿತೆಂದರೆ ಇಲ್ಲಿಯ ಅಬ್ಬೆ ಫಾಲ್ಸ್ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗುತ್ತದೆ. ಕಾಫಿ ತೋಟದ ಮಧ್ಯೆ ಪ್ರವಾಸಿಗರ ದಂಡು ಸಾಗುತ್ತಿದೆ. ದೂರದಲ್ಲಿ ನೀರಿನ ನಿನಾದ ಕಿವಿಗೆ ಅಪ್ಪಳಿಸುತ್ತಿದೆ. ಆಗಾಗ ಬೀಳುವ ತುಂತುರು ಮಳೆಗೆ ಪ್ರವಾಸಿಗರು ಕಿಕ್ಕಿರಿದು ಸೇರಿದ್ದಾರೆ. ಈ ದೃಶ್ಯ ಮಡಿಕೇರಿಯ ಅಬ್ಬೆ ಜಲಪಾತದಲ್ಲಿ ಕಂಡು ಬರುತ್ತಿದೆ.
ಮಡಿಕೇರಿಯಲ್ಲಿ ವರುಣ ಅಬ್ಬರಿಸುತ್ತಿರುವ ಕಾರಣ ಅಬ್ಬೆ ಜಲಪಾತ ದುಮ್ಮುಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಮಡಿಕೇರಿಯಿಂದ 8 ಕಿ.ಮೀ ದೂರದಲ್ಲಿರುವ ಈ ಜಲಪಾತವನ್ನು ನೋಡುವುದೇ ಕಣ್ಣಿಗೆ ಹಬ್ಬವಾಗಿದೆ. ಇದನ್ನು ನೋಡಲು ರಾಜ್ಯ ಮಾತ್ರವಲ್ಲದೆ ಹೊರ ರಾಜ್ಯಗಳಿಂದಲೂ ಇಲ್ಲಿಗೆ ಪ್ರವಾಸಿಗರ ದಂಡು ಹರಿದು ಬರುತ್ತಿದೆ. ಜಲಪಾತ ಹಾಗೂ ಸುತ್ತಲಿನ ಪ್ರಕೃತಿ ಸೌಂದರ್ಯ ನೋಡಿ ಆನಂದಿಸುತ್ತಿದ್ದಾರೆ.
ಅಬ್ಬೆ ಜಲಪಾತದ ವಿಶೇಷ ಎಂದರೆ ವಾಹನದಿಂದ ಇಳಿದು ಸುಮಾರು ಅರ್ಧ ಕಿ.ಮೀ ನಡೆದುಕೊಂಡು ಹೋಗಬೇಕು. ಇದು ಪ್ರವಾಸಿಗರಿಗೆ ಮತ್ತಷ್ಟು ಮಜಾ ನೀಡುತ್ತದೆ. ದೊಡ್ಡವರಿಂದ ಹಿಡಿದು ಪುಟ್ಟ ಪುಟ್ಟ ಮಕ್ಕಳವರೆಗೂ ಆಗಮಿಸಿ ಜಲಪಾತದ ಸೌಂದರ್ಯವನ್ನು ನೋಡಿ ಆನಂದಿಸುತ್ತಾರೆ. ಮಡಿಕೇರಿಯಿಂದ ಇಲ್ಲಿಗೆ ಬಸ್ ವ್ಯವಸ್ಥೆಯಿಲ್ಲ. ಆದ ಕಾರಣ ಪ್ರತಿಯೊಬ್ಬರು ವಾಹನದಲ್ಲಿ ಇಲ್ಲಿಗೆ ಆಗಮಿಸುತ್ತಾರೆ. ಇನ್ನೂ ಮುಂದಿನ ಐದು ತಿಂಗಳವರೆಗೂ ಜಲಪಾತದ ಈ ಸೌಂದರ್ಯ ಇದೇ ರೀತಿ ಇರುತ್ತದೆ.
ಒಟ್ಟಿನಲ್ಲಿ ಧಾರಾಕಾರ ಮಳೆಯಿಂದಾಗಿ ಹಾಲ್ನೊರೆಯಂತೆ ಧುಮ್ಮುಕ್ಕುವ ಅಬ್ಬೆ ಫಾಲ್ಸ್ ವೀಕ್ಷಣೆ ಮಾಡುವುದೇ ಪ್ರವಾಸಿಗರ ಪಾಲಿಗೆ ಸ್ವರ್ಗ. ನೀವು ಕೂಡ ಬಿಡುವು ಮಾಡಿಕೊಂಡು ಬನ್ನಿ. ಅಬ್ಬೆ ಫಾಲ್ಸ್ ವನ್ನು ನೋಡಿ ಎಂಜಾಯ್ ಮಾಡಿ.