ಹೈದರಾಬಾದ್: 32 ವರ್ಷದ ಎನ್‌ಆರ್‌ಐ ಮಹಿಳೆ ಅತ್ತೆ-ಮಾವನ ಕಿರುಕುಳ ತಾಳಲಾರದೇ ಚಿಕ್ಕಪ್ಪನ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಂಬೈ ನಗರದಲ್ಲಿ ನಡೆದಿದೆ.
ಜುವ್ವಾಡಿ ಶ್ರೀಲತಾ ಆತ್ಮಹತ್ಯೆಗೆ ಶರಣರಾದ ಎನ್‌ಆರ್‌ಐ ಮಹಿಳೆ. ಪತಿಯ ಮನೆಯವರು ವರದಕ್ಷಿಣೆಗಾಗಿ ಕಿರುಕುಳ ನೀಡಿದ್ದಾರೆ. ಪತಿ ಜುವ್ವಾಡಿ ವಂಶಿರಾವ್ ಈಕೆಯನ್ನು ಬಿಟ್ಟು ಹೈದರಾಬಾದ್‍ನಿಂದ ಇಂಗ್ಲೆಂಡ್‍ಗೆ ಹೋಗಿದ್ದಾನೆ ಎಂದು ಮೃತಳ ಸಂಬಂಧಿಕರು ಆರೋಪಿಸಿದ್ದಾರೆ.
ಹೈದರಾಬಾದ್‍ನ ರಾಮಂತಪುರದಲ್ಲಿರುವ ಅತ್ತೆ-ಮಾವ ನಿವಾಸಕ್ಕೆ ಸಂಬಂಧಿಕರು ನ್ಯಾಯ ಕೇಳಲು ಮೃತದೇಹವನ್ನು ತಂದಿದ್ದರು. ಆದರೆ ಅವರು ಬರುವ ಬಗ್ಗೆ ಮೊದಲೇ ತಿಳಿದು ಎರಡೂ ಮನೆಯನ್ನು ಲಾಕ್ ಮಾಡಿಕೊಂಡು ಅಲ್ಲಿಂದ ಓಡಿಹೋಗಿದ್ದರು. ನಂತರ ಸಂಬಂಧಿಕರು ಅವರ ಮನೆಯ ಮುಂದೆ ಮೃತದೇಹವಿಟ್ಟು ನ್ಯಾಯಸಿಗಬೇಕು ಎಂದು ಪ್ರತಿಭಟನೆ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಏನಿದು ಪ್ರಕರಣ?
ಮೃತ ಶ್ರೀಲತಾ ಅವರು 2011ರಲ್ಲಿ ವಂಶಿರಾವ್‍ನನ್ನು ಮದುವೆಯಾಗಿದ್ದರು. ನಂತರ 2012ರಲ್ಲಿ ಇಂಗ್ಲೆಂಡ್‍ಗೆ ಹೋಗಿ ವಾಸಿಸುತ್ತಿದ್ದರು. ಮದುವೆಯಾಗಿ ಹೆಣ್ಣು ಮಗುವಾದ ಬಳಿಕ ವಂಶಿರಾವ್ ಕಿರುಕುಳ ನೀಡಲು ಆರಂಭಿಸಿದ್ದಾನೆ. ಈ ಬಗ್ಗೆ ಶ್ರೀಲತಾ ತಮ್ಮ ತಂದೆ ಶ್ರೀನಿವಾಸ್ ರಾವ್ ಮತ್ತು ತಾಯಿ ಚಂದ್ರಕಲಾ ಬಳಿ ಹೇಳಿಕೊಂಡಿದ್ದಾರೆ. ಆದರೆ ಪೋಷಕರು ಮಗಳಿಗೆ ಸಹಾಯ ಮಾಡಲು ಸಾಧ್ಯವಾಗದ ಕಾರಣ ದುಃಖದಲ್ಲಿಯೇ ಮೃತಪಟ್ಟಿದ್ದರು ಎಂದು ಸಂಬಂಧಿಕರು ತಿಳಿಸಿದ್ದಾರೆ.
ಶ್ರೀಲತಾ ತಾಯಿ 2016ರಲ್ಲಿ ನಿಧನರಾದಾಗ ಆಕೆ ಭಾರತಕ್ಕೆ ಬಂದಿದ್ದರು. ಆದರೆ ಒಂದು ತಿಂಗಳೊಳಗೆ ಇಂಗ್ಲೆಂಡ್‍ಗೆ ವಾಪಸ್ ಹೋಗಿದ್ದರು. ಈ ವೇಳೆ ಆಕೆ ರೈಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ಆದರೆ ಈ ಬಗ್ಗೆ ದೂರು ದಾಖಲಾದರೆ ಪತಿಗೆ 20 ವರ್ಷಗಳ ಕಾಲ ಜೈಲು ಶಿಕ್ಷೆಯಾಗಬಹುದೆಂದು ಆತ್ಮಹತ್ಯೆ ಮಾಡಿಕೊಂಡಿರಲಿಲ್ಲ.
ಮೃತ ಶ್ರೀಲತಾ, ವಂಶಿ ಮತ್ತು ಮಗು ಮೂವರು 2018ರಲ್ಲಿ ಹೈದರಾಬಾದ್‍ಗೆ ಬಂದಿದ್ದರು. ಆಗ ವಂಶಿರಾವ್ ಶ್ರೀಲತಾರನ್ನು ತನ್ನ ಪೋಷಕರೊಂದಿಗೆ ಇರಲು ಹೇಳಿ ಬಿಟ್ಟು ಹೋಗಿದ್ದಾನೆ. ಇದೇ ವೇಳೆ ಅತ್ತೆ-ಮಾವ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದರು. ಆದರೆ ಪತಿಯಿಂದಲೂ ಯಾವುದೇ ಬೆಂಬಲವಿಲ್ಲದೆ ಶ್ರೀಲತಾ ಖಿನ್ನತೆಗೆ ಜಾರಿದ್ದರು. ಸಂಬಂಧಿಕರು ಮಧ್ಯೆ ಪ್ರವೇಶಿಸಿ ಇವರ ಸಂಬಂಧ ಸರಿ ಮಾಡಲು ಪ್ರಯತ್ನಿಸಿದ್ದರು. ಆದರೂ ಏನು ಪ್ರಯೋಜವಾಗಿಲ್ಲ. ಪತಿ ಭಾರತದಲ್ಲಿ ಶ್ರೀಲತಾ ಮತ್ತು ಮಗಳನ್ನು ಬಿಟ್ಟು ಇಂಗ್ಲೆಂಡ್‍ಗೆ ವಾಪಸ್ ಹೋಗಿದ್ದ.
ಇತ್ತ ಅತ್ತೆ-ಮಾವ ಕಿರುಕುಳ ತಾಳಲಾರದೇ ಹಾಗೂ ಪತಿಯನ್ನು ಬಿಟ್ಟು ಒಂಟಿಯಾಗಿರಲು ಇಷ್ಟವಿಲ್ಲದೆ ಮುಂಬೈಗೆ ತೆರಳಿ ತನ್ನ ತಾಯಿಯ ಚಿಕ್ಕಪ್ಪ ಮನೆಗೆ ಹೋಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ.