ಹಿಜಬ್‌ ವಿವಾದ – ಶೀರೂರು ಮಠ, ಶಬರಿ ಮಲೆ, ತ್ರಿವಳಿ ತಲಾಖ್‌ ಪ್ರಕರಣ ಪ್ರಸ್ತಾಪಿಸಿ ಎಜಿ ವಾದ

Public TV
3 Min Read
HIJAB HIGHCOURT

ಬೆಂಗಳೂರು: ಶೀರೂರು ಮಠ, ಶಬರಿ ಮಲೆ, ತ್ರಿವಳಿ ತಲಾಕ್‌ ಪ್ರಕರಣವನ್ನು ಪ್ರಸ್ತಾಪಿಸಿ ಸರ್ಕಾರದ ಪರ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದ ಮಂಡಿಸಿದ್ದಾರೆ.

ಹಿಜಬ್ ವಿವಾದ ಸಂಬಂಧ ಏಳನೇ ದಿನದ ವಿಚಾರಣೆ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಋತುರಾಜ್‌ ಅವಸ್ಥಿ,ನ್ಯಾ.ಕೃಷ್ಣ ದೀಕ್ಷಿತ್‌, ನ್ಯಾ. ಖಾಜಿ ಜೈಬುನ್ನೀಸಾ ಅವರಿದ್ದ ತ್ರಿಸದಸ್ಯ ಪೀಠದಲ್ಲಿ ನಡೆಯಿತು.

ಇವತ್ತು ಕೂಡ ಸರ್ಕಾರದ ಪರವಾಗಿ ಅಡ್ವೊಕೇಟ್‌ ಜನರಲ್ ವಾದ ಮಂಡನೆ ಮಾಡಿದರು. ಶಿಕ್ಷಣ ಸಂಸ್ಥೆಗಳು ಹಿಜಬ್‍ಗೆ ಅನುಮತಿ ನೀಡಿದರೆ ನಿಮ್ಮ ಅಭ್ಯಂತರವಿಲ್ಲವೇ? ಹಿಜಬ್ ಬಗ್ಗೆ ಸರ್ಕಾರದ ನಿಲುವೇನು ಎಂದು ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಪೂರ್ಣ ಪೀಠ ಪ್ರಶ್ನಿಸಿತು.

chikkodi hijab 2

ಇದಕ್ಕೆ ಉತ್ತರಿಸಿದ ಎಜಿ ನಾವದಗಿ, ಸರ್ಕಾರ ಹಿಜಬ್‍ಗೆ ನಿರ್ಬಂಧ ಹೇರಿಲ್ಲ. ಈ ವಿಚಾರದಲ್ಲಿ ಮೂಗು ತೂರಿಸಿಲ್ಲ. ಕಾಲೇಜಿನಲ್ಲಿ ಸಮಾನತೆ ಸ್ಥಾಪಿಸುವುದು ಕರ್ನಾಟಕ ಶಿಕ್ಷಣ ಕಾಯ್ದೆಯ ಪ್ರಮುಖ ಧ್ಯೇಯವಾಗಿದೆ. ಇಲ್ಲಿ ನಾವು ನಿರ್ಬಂಧಿಸಿಯೇ ಇಲ್ಲ, ಅದು ಕಾಲೇಜು ಅಭಿವೃದ್ಧಿ ಸಮಿತಿ(ಸಿಡಿಸಿ) ನಿರ್ಧಾರಕ್ಕೆ ಬಿಟ್ಟಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ನ್ಯಾಯಪೀಠ, ಸಿಡಿಸಿಗಳು ಶಾಸನಬದ್ಧ ಮಂಡಳಿಗಳಿಲ್ಲ. ಸಿಡಿಸಿ ಸಮವಸ್ತ್ರ ನಿರ್ಧರಿಸುತ್ತದೆ ಎಂದು ನೀವು ಹೇಳುತ್ತಿದ್ದೀರಿ. ಅವರು ಏನು ಮಾಡಿದ್ದಾರೆ ಎಂಬುದನ್ನು ನಾವು ಪರಿಶೀಲಿಸಬೇಕೇ? ಸಿಡಿಸಿಗಳು ಶಾಸನಬದ್ಧ ಸಂಸ್ಥೆಗಳಲ್ಲವಾದ್ದರಿಂದ ನ್ಯಾಯಾಲಯದ ಆದೇಶದಿಂದ ಅವುಗಳನ್ನು ನಿಯಂತ್ರಿಸಬಹುದೇ ಎಂದು ಪ್ರಶ್ನಿಸಿತು.  ಇದನ್ನೂ ಓದಿ: ಹಿಜಬ್ ವಿವಾದದ ನಡುವೆ ಮೈಸೂರು ಪ್ಯಾಲೇಸ್‍ನಲ್ಲಿ ನಮಾಜ್

HIJAB 7

ಧಾರ್ಮಿಕ ಸಂಕೇತಗಳನ್ನು ಶಿಕ್ಷಣ ಸಂಸ್ಥೆಗಳಲ್ಲಿ ಬಳಕೆ ಮಾಡಬಾರದು ಎಂಬುದು ಸರ್ಕಾರದ ನಿಲುವು. ಆದರೆ ಯಾವುದನ್ನು ಧಾರ್ಮಿಕ ಸಂಕೇತ ಎಂದು ಪರಿಗಣಿಸಬೇಕು. ಯಾವುದನ್ನು ಪರಿಗಣಿಸಬಾರದು ಎಂಬುದನ್ನು ಶಿಕ್ಷಣ ಸಂಸ್ಥೆಗಳಿಗೆ ಬಿಡಲಾಗಿದೆ ಎಂದು ನಾವದಗಿ ಉತ್ತರಿಸಿದರು.

ನಮ್ಮ ಪ್ರಕಾರ ಹಿಜಬ್ ಮುಸ್ಲಿಮ್ ಧರ್ಮದ ಮೂಲಭೂತ ಆಚರಣೆ ಅಲ್ಲ. ಸಮವಸ್ತ್ರಕ್ಕೆ ಧಾರ್ಮಿಕತೆಯನ್ನು ಬೆರೆಸುವುದು ಸರಿಯಲ್ಲ ಎಂದು ನಾವದಗಿ ಮತ್ತೊಮ್ಮೆ ಅಭಿಪ್ರಾಯಪಟ್ಟರು. ಧಾರ್ಮಿಕ ಕಟ್ಟುಪಾಡುಗಳನ್ನು ಪಾಲಿಸದಿದ್ದರೆ ಇಡೀ ಧರ್ಮವೇ ನಾಶವಾಗುತ್ತಾ? ಸಂಪೂರ್ಣ ವಿವಾದವೇ ಹಿಜಬ್ ಕುರಿತಾಗಿ ಉದ್ಭವಿಸಿದೆ. ಹಿಜಬ್ ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂಬುದನ್ನು ನಿರ್ಧರಿಸಬೇಕು. . ಹೀಗಾಗಿ ಹೈಕೋರ್ಟ್ ಈ ಬಗ್ಗೆ ತೀರ್ಮಾನ ನೀಡುವ ಅಗತ್ಯವಿದೆ ಎಂದು ಎಜಿ ನಾವದಗಿ ವಾದಿಸಿದರು. ಇದನ್ನೂ ಓದಿ: UAEನಿಂದ ಗೋಲ್ಡನ್ ವೀಸಾ ಪಡೆದ ಪ್ರಣಿತಾ!

ಧಾರ್ಮಿಕ ಆಚರಣೆ, ಆತ್ಮಸಾಕ್ಷಿಯ ಆಚರಣೆಯಾಗುವುದೇ ಎಂದು ಸರ್ಕಾರಕ್ಕೆ ಪೂರ್ಣ ಪೀಠ ಪ್ರಶ್ನೆ ಮಾಡಿತು. ಇದೇ ಸಂದರ್ಭದಲ್ಲಿ ಸಾರಸ್ವತ ಬ್ರಾಹ್ಮಣರ ಪೂಜೆ ಹಕ್ಕಿಗೆ ಸಂಬಂಧಿಸಿ ವೆಂಕಟ ಸ್ವಾಮಿ ಪ್ರಕರಣವನ್ನು, ಶೀರೂರು ಮಠ ಪ್ರಕರಣವನ್ನು, ಶಬರಿ ಮಲೆ ಪ್ರಕರಣವನ್ನು ಅಡ್ವೋಕೇಟ್ ಜನರಲ್ ಪ್ರಸ್ತಾಪಿಸಿ ಈ ಹಿಂದೆ ನ್ಯಾಯಾಲಯಗಳು ಧಾರ್ಮಿಕ ಹಕ್ಕು ವಿಚಾರಕ್ಕೆ ಸಂಬಂಧಿಸಿದಂತೆ ನೀಡಿದ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು.

Hassan hijab

ಶಬರಿಮಲೆ ತೀರ್ಪಿನಲ್ಲಿ ನ್ಯಾ. ಡಿ ವೈ ಚಂದ್ರಚೂಡ್‌ ಅವರು ಇಂಥ ಪ್ರಕರಣಗಳಲ್ಲಿ ನ್ಯಾಯಾಲಯಗಳಿಗೆ ಪ್ರಮುಖ ಸ್ಥಾನವಿದೆ ಎಂದು ತೀರ್ಪು ನೀಡಿದ ವಿಚಾರವನ್ನು ಪ್ರಸ್ತಾಪಿಸಿದರು. ಭಗವದ್ಗೀತೆ, ಬೈಬಲ್‌, ಕುರಾನ್‌ನಲ್ಲಿ ಬಹಳಷ್ಟು ವಿಚಾರಗಳಿವೆ. ಆದರೆ, ಅವುಗಳನ್ನು ಶೈಕ್ಷಣಿಕ ಸಂಸ್ಥೆಗಳಿಂದ ಹೊರಗಿಡಬೇಕು ಎಂದು ಹೇಳಲಾಗಿದೆ.ಈ ಕಾರಣಕ್ಕೆ ಸಂವಿಧಾನ ರಚನಕಾರರು ಪ್ರಜ್ಞಾಪೂರ್ವಕವಾಗಿ ಅವುಗಳನ್ನು ಹೊರಗಿಟ್ಟಿದ್ದಾರೆ ಎಂದು ಕೋರ್ಟ್‌ ಗಮನಕ್ಕೆ ತಂದರು.

ಜಾವೇದ್‌ ಪ್ರಕರಣವನ್ನು ಪ್ರಸ್ತಾಪಿಸಿದ ಎಜಿ, ಇಸ್ಲಾಮ್‌ನಲ್ಲಿ ಬಹು ಪತ್ನಿತ್ವಕ್ಕೆ ರಕ್ಷಣೆ ಇದ್ದು, ಅದಕ್ಕೆ ವಿರುದ್ಧವಾದ ಕಾನೂನು ನಿಲ್ಲುವುದಿಲ್ಲ ಎಂದು ವಾದಿಸಲಾಗಿತ್ತು. ಆದರೆ ಈ ವಾದವನ್ನು ಸುಪ್ರೀಂ ಕೋರ್ಟ್‌ ವಜಾ ಮಾಡಿತ್ತು. ಶಾಹೀರಾ ಬಾನು ಪ್ರಕರಣವನ್ನು ಉಲ್ಲೇಖಿಸಿ ತ್ರಿವಳಿ ತಲಾಖ್‌ ಹೇಳುವುದನ್ನು ಕೋರ್ಟ್‌ ವಜಾ ಮಾಡಿತ್ತು ಎಂದು ವಾದಿಸಿದರು. ಅಂತಿಮವಾಗಿ ವಿಚಾರಣೆಯನ್ನು ಕೋರ್ಟ್‌ ಮಂಗಳವಾರ ಮಧ್ಯಾಹ್ನ 2:30ಕ್ಕೆಮುಂದೂಡಿತು.

Share This Article
Leave a Comment

Leave a Reply

Your email address will not be published. Required fields are marked *